ನ್ಯೂಸ್ ನಾಟೌಟ್: ವಕೀಲ ಜಗದೀಶ್ ಬಿಗ್ ಬಾಸ್ ಗೆ ಬಂದು ಫೇಮಸ್ ಆದವರು. ಹಲವು ವಿಚಾರಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಜಗದೀಶ್ ಹಲವು ಬಾರಿ ಕಿರಿಕ್ ಮಾಡಿಕೊಂಡದ್ದಿದೆ. ಹೀಗಿರುವಾಗಲೇ ಜಗದೀಶ್ ಮೇಲೆ ಹಲ್ಲೆಯ ಪ್ರಯತ್ನ ನಡೆದಿದೆ. ಬೆಂಗಳೂರಿನ ಕೊಡಿಗೇಹಳ್ಳಿಯ ವಿರೂಪಾಕ್ಷ ನಗರದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಕೊಡಿಗೇಹಳ್ಳಿಯಲ್ಲಿ ದೂರು ದಾಖಲಾಗಿದೆ.
ಕೊಡಿಗೇಹಳ್ಳಿಯಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಒಂದು ಇದೆ. ಇದೇ ರಸ್ತೆಯಲ್ಲಿ ಸ್ಥಳೀಯರು ಅಣ್ಣಮ್ಮ ದೇವಿಯನ್ನು ಕೂರಿಸಲು ಪ್ಲ್ಯಾನ್ ಮಾಡಿದ್ದರು. ಇದಕ್ಕೆ ಜಗದೀಶ್ ಆಕ್ಷೇಪ ತೆಗೆದಿದ್ದಾರೆ. ಅಲ್ಲದೆ ಠಾಣೆಗೆ ದೂರು ನೀಡಿದ್ದಾರೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರ ಜೊತೆ ಚರ್ಚಿಸಿದ್ದಾರೆ. ಪೆಂಡಾಲ್ ಹಾಕಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತದೆ ಎಂಬುದು ಜಗದೀಶ್ ವಾದ ಆಗಿತ್ತು. ಆದರೆ, ಪೆಂಡಾಲ್ ತೆಗೆಯಲು ಸ್ಥಳೀಯರು ಒಪ್ಪಿಲ್ಲ.
ಜಗದೀಶ್ ವಿರುದ್ಧ 40ಕ್ಕೂ ಅಧಿಕ ಸ್ಥಳೀಯರು ಬಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಅವರ ಮೇಲೆ ಹಲ್ಲೆಗೂ ಯತ್ನ ನಡೆದಿದೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಟ್ರೋಲ್ ಪೇಜ್ಗಳಲ್ಲಿ ಈ ವಿಡಿಯೋನ ಹರಿಬಿಡಲಾಗಿದೆ.