- +91 73497 60202
- [email protected]
- January 8, 2025 10:00 PM
ನ್ಯೂಸ್ ನಾಟೌಟ್ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಎಚ್ಎಂಪಿವಿ (HMPV) ವೈರಸ್ ದೃಢಪಟ್ಟಿದೆ. ಮಗುವಿಗೆ ಜ್ವರ ಬಂದ ಕಾರಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ HMPV ವೈರಸ್ ಇರುವುದು ಪತ್ತೆಯಾಗಿದೆ. ಆದರೆ, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ತಿಳಿಸಿದ್ದಾರೆ. ಎಚ್ ಎಂಪಿವಿ ವೈರಸ್ ಭಾರತದಲ್ಲೂ ಇದೆ. ಇಲ್ಲಿ ಪತ್ತೆಯಾಗಿರುವುದು ಸಾಮಾನ್ಯ HMPV ವೈರಸ್ಸೇ ಅಥವಾ ಚೀನಾದ ತಳಿಯಾ ಎಂಬ ಗೊಂದಲ ಇದೆ. ಭಾರತದಲ್ಲೂ ಸಾಮಾನ್ಯ HMPV ವೈರಸ್ ಶೇ 0.78 ರಷ್ಟು ಕಾಣಿಸುತ್ತದೆ ಎಂದು ಅವರು ತಿಳಿಸಿದ್ದಾರೆ.ಸದ್ಯ ಸೋಂಕು ಪತ್ತೆಯಾಗಿರುವ ಮಗುವಿಗೆ ಮತ್ತು ಕುಟುಂಬದವರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಈ ಹಿನ್ನೆಲೆಯ ಬಗ್ಗೆ ಆರೋಗ್ಯ ಇಲಾಖೆ ಕೂಡಾ ಪರಿಶೀಲನೆ ನಡೆಸುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎನ್ನಲಾಗಿದೆ. ಮಗುವಿನಲ್ಲಿ ವೈರಸ್ ಪತ್ತೆಯಾದ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದೂಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸೂಕ್ತ ಮುನ್ನೆಚ್ಚರಿಕೆ ವಹಿಸಿ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಕ್ಕೆ ಸೂಚಿಸಿದೆ. ಸದ್ಯ ಚೀನಾದಲ್ಲಿ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿರುವ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಅಥವಾ ಎಚ್ಎಂಪಿವಿ ಹೊಸದೇನಲ್ಲ. ಇದನ್ನು ಮೊದಲು 2001 ರಲ್ಲಿ ಕಂಡುಹಿಡಿಯಲಾಯಿತು ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳಿದೆ. ಆದಾಗ್ಯೂ, ಕೆಲವು ಸೆರೋಲಾಜಿಕ್ ಪುರಾವೆಗಳು ವೈರಸ್ 1958 ರಿಂದಲೇ ವ್ಯಾಪಕವಾಗಿ ಹರಡಿತ್ತು ಎಂಬುದನ್ನು ನಿರೂಪಿಸಿರುವುದಾಗಿ ತಜ್ಞರು ಹೇಳಿದ್ದಾರೆ.ಸದ್ಯ ಎಚ್ಎಂಪಿವಿ ವೈರಸ್ ಹರಡುವಿಕೆ ತಡೆಗೆ ಯಾವುದೇ ಲಸಿಕೆ ಇಲ್ಲ. ಭಾರತದಲ್ಲಿ ಸದ್ಯ ಯಾವುದೇ ರೀತಿಯಲ್ಲಿ ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಹೇಳಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ