ಮಾರ್ಗಮಧ್ಯೆ ರೈಲಿನ ಚೈನ್ ಎಳೆದು ಇಳಿದು ಪಕ್ಕದ ಹಳಿಗೆ ಹೋದವರ ಮೇಲೆ ಹರಿದ ಮತ್ತೊಂದು ರೈಲು..! 12 ಮಂದಿ ಸಾವು..!

ನ್ಯೂಸ್ ನಾಟೌಟ್: ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಬುಧವಾರ(ಜ.22) ಸಂಜೆ ಮಾರ್ಗ ಮಧ್ಯೆ ಚೈನ್ ಎಳೆದು ರೈಲಿನಿಂದ ಇಳಿದು ಹಳಿಗಳ ಮೇಲೆ ನಿಂತಿದ್ದ ಪ್ರಯಾಣಿಕರ ಮೇಲೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ರೈಲು ಡಿಕ್ಕಿ ಹೊಡೆದು ಕನಿಷ್ಠ 12 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪಚೋರಾ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದ್ದು, ಸಂಜೆ 5 ಗಂಟೆ ಸುಮಾರಿಗೆ ಚಲಿಸುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯಿಂದಾಗಿ ಚೈನ್ ಎಳೆದು ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಭಯದಿಂದ ಪ್ರಯಾಣಿಕರು ಕೂಡಲೇ ರೈಲಿನಿಂದ ಇಳಿದು ಪಕ್ಕದ ಹಳಿ ಮೇಲೆ ನಿಂತಿದ್ದರು. ಇದೇ ವೇಳೆ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಜನರ ಮೇಲೆ ಹರಿದಿದೆ. ಪುಷ್ಪಕ್ ಎಕ್ಸ್‌ಪ್ರೆಸ್‌ನ ಕೆಲವು ಪ್ರಯಾಣಿಕರು ಕೆಳಗಿಳಿದು, ಪಕ್ಕದ ಹಳಿ ಮೇಲೆ ನಿಂತಿದ್ದ ಪ್ರಯಾಣಿಕರಿಗೆ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರ ಸ್ವಪ್ನಿಲ್ ನೀಲಾ ಅವರು ತಿಳಿಸಿದ್ದಾರೆ. Click