_ ದಯಾಮಣಿ ಹೇಮಂತ್
ನ್ಯೂಸ್ ನಾಟೌಟ್: ತುಳುನಾಡಿನ ಬಹುತೇಕರು ಉದ್ಯೋಗದ ನಿಮಿತ್ತ ಮಾಯಾನಗರಿ ಬೆಂಗಳೂರಲ್ಲಿ ನೆಲೆಸಿದ್ದಾರೆ.ತೀರಾ ಅಪರೂಪ ಎಂಬಂತೆ ಇವರೆಲ್ಲರಿಗೂ ಅಲ್ಲಿ ಇಲ್ಲಿ ತುಳು ಮಾತನಾಡುವವರು ಎದುರು ಸಿಕ್ಬಿಟ್ರೆ ಅವರಿಗಾಗುವ ಖುಷಿಯನ್ನು ಹೇಳತೀರದು.ಅದೇ ಸಂದರ್ಭದಲ್ಲಿ ನೆನಪುಗಳೆಲ್ಲವೂ ಒಮ್ಮಿಂದೊಮ್ಮೆಲೆ ಮತ್ತೆ ತಾಯ್ನಾಡಿನತ್ತ ಮರಳುತ್ತೆ.ತಾಯಿ ಭಾಷೆ ಅಂದ್ರೆನೇ ಹಾಗೆಯೇ ಅಲ್ವ? ಆ ಭಾಷೆ ತಾಯಿಯಷ್ಟೇ ಶ್ರೇಷ್ಠ.ಯೆಸ್, ಇನ್ನು ಮುಂದೆ ಬೆಂಗಳೂರಿನಲ್ಲಿ ತುಳು ಭಾಷೆ ಮಾತನಾಡುವವರು ಚಿಂತೆ ಮಾಡಬೇಕಾಗಿಲ್ಲ. ಇದಕ್ಕಾಗಿಯೇ ಇನ್ಸ್ಟಾದಲ್ಲಿ ಪೇಜ್ ಆರಂಭಗೊಂಡಿದ್ದು,ತುಳುವರನ್ನು ಸುಲಭವಾಗಿ ಭೇಟಿಯಾಗಬಹುದು.
ಉದ್ಯೋಗ , ಶಿಕ್ಷಣ ಅಂತ ಹೇಳಿ ಬೆಂಗಳೂರಿಗೆ ತುಳುನಾಡಿನವರು ಹಲವು ಮಂದಿ ಹೋಗಿರುತ್ತಾರೆ.ಅವರನ್ನು ಒಟ್ಟು ಗೂಡಿಸುವ ಪ್ರಯತ್ನವಿದು. ಹೌದು, ಕರಾವಳಿಯ ಮಂದಿ ಜತೆಗೂಡಿ ʼಬೆಂಗಳೂರು ತುಳುವಾಸ್ʼ ಎಂಬ ಇನ್ಸ್ಟಾಗ್ರಾಂ ಕಮ್ಯೂನಿಟಿ ರಚಿಸಿಕೊಂಡು ತುಳು ಭಾಷೆಯ ಕುರಿತಂತೆ ಹಲವು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ.ಅಂತೆಯೇ ಐತಿಹಾಸಿಕ ಲಾಲ್ ಬಾಗ್ ಉದ್ಯಾನವನದಲ್ಲಿ ನಿನ್ನೆ(ರವಿವಾರದಂದು ಜ.26) ಒಂದು ಕಡೆ ಪ್ಲವರ್ ಫೆಸ್ಟಿವಲ್ ನಡೆಯುತ್ತಿದ್ದರೆ ಅದೇ ದಿನದಂದು ಇತ್ತ ʻಬೆಂಗಳೂರು ತುಳುವಾಸ್ʼ ಮೀಟ್ ಅಪ್ ನಡೆಯಿತು. ಬೆಂಗಳೂರಿನಲ್ಲಿ ನೆಲೆಸಿರುವ ತುಳುವರು ಒಟ್ಟಾಗಿ ಸೇರಿ ರಜಾದಿನವನ್ನು ಸಂಭ್ರಮದಿಂದ ಕಳೆದಿದ್ದಾರೆ. ಅವಿಭಜಿತ ಉಡುಪಿ-ದಕ್ಷಿಣ ಕನ್ನಡದ ಹಲವು ಮಂದಿ ಕೆಲಸದ ಒತ್ತಡದ ನಡುವೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಿಲ್ಯಾಕ್ಸ್ ಆಗಿದ್ದು ವಿಶೇಷ.
ಲಿಂಕ್ ಒತ್ತಿ ವಿಡಿಯೋ ವೀಕ್ಷಿಸಿ..👇
ಈ ಪುಟ್ಟ ಕಾರ್ಯಕ್ರಮವು ಅನೇಕ ವಿಚಾರಗಳಿಗೆ ಸಂಬಂಧ ಪಟ್ಟ ಹಾಗೆ ಗಮನ ಸೆಳೆಯಿತು. ಮೊದಲಿಗೆ ತುಳುಭಾಷೆಯನ್ನು ಹೆಚ್ಚು ಬಳಸುವಿಕೆ ಕುರಿತು ಹಲವು ಚಟುವಟಿಕೆ ನಡೆಸಲಾಯಿತು.ಕರಾವಳಿಯ ಪ್ರಮುಖ ಸ್ಥಳಗಳ ಮೂಲ ತುಳು ಹೆಸರುಗಳ ವಿವರಗಳನ್ನು ಕ್ವಿಜ್ ಮಾದರಿಯಲ್ಲಿ ಪರಿಚಯಿಸಲಾಯಿತು. ಉದ್ಯೋಗ ಕ್ಷೇತ್ರದಲ್ಲಿ ತುಳುವರನ್ನು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಲು ಐಟಿ- ಬಿಟಿ ಸಂಸ್ಥೆಗಳಲ್ಲಿನ ಉದ್ಯೋಗಗಳ ಮಾಹಿತಿಯನ್ನು ಹಂಚಿಕೊಳ್ಳುವುದರ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಕೆಲವು ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಂಪನ್ಮೂಲ ವ್ಯಕ್ತಿಗಳು(ಎಚ್ಆರ್), ರಿಕ್ರೂಟರ್ ಮ್ಯಾನೇಜರ್ಗಳು, ಇಂಜಿನಿಯರ್ಸ್ ಸೇರಿ ಹಲವು ಮಂದಿ ಈ ಕಾರ್ಯಕ್ರಮಕ್ಕೆ ಹಾಜರಾಗಿ ಕಾರ್ಯಕ್ರಮದ ಘನತೆ ಹೆಚ್ಚಿಸುವಂತೆ ಮಾಡಿದರು.
ಇನ್ನು ಕರಾವಳಿ ಮಂದಿಗೆ ಬೆಂಗಳೂರಿನಲ್ಲಿ ಹಲವು ರೀತಿಯ ಸಮಸ್ಯೆಗಳು ಕಾಡುತ್ತೆ.ಪಿಜಿ ಹಾಗೂ ವಸತಿಗೃಹಗಳ ಕೊರತೆ ಅಥವಾ ಇನ್ನಾವುದೇ ಸಮಸ್ಯೆಗಳು ಇರಬಹುದು, ಅವುಗಳನ್ನು ಕರಾವಳಿಗರೇ ಸೇರಿ ಬಗೆಹರಿಸೋಣ ಎನ್ನುವುದರ ಬಗ್ಗೆಯೂ ಚರ್ಚೆಗಳು ಇಲ್ಲಿ ನಡೆದವು.ಸುಮಾರು ಹತ್ತು ಸಾವಿರಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿರುವ ʼಬೆಂಗಳೂರು ತುಳುವಾಸ್ʼ ಪೇಜ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಜಿತೇಶ್ ಕುಲಾಲ್ ತೋಕೂರು, ಸನತ್ ಅಮೀನ್, ಜಿತೇಶ್ ಹೊಸಬೆಟ್ಟು, ಸಿಂಚನಾ ರಾವ್, ಶ್ರೀಪರ್ಣ ಶೆಟ್ಟಿ, ಕಾರ್ತಿಕ್ ಅಮೈ, ರಂಜನ್ ಜೈ ತುಳುನಾಡು ಮೊದಲಾದವರು ಉಪಸ್ಥಿತರಿದ್ದರು.