ನ್ಯೂಸ್ ನಾಟೌಟ್: ಹಾಡಹಗಲೇ ಬೀದರ್ ನಲ್ಲಿ ಸಿನಿಮೀಯ ರೀತಿಯ ದರೋಡೆ ನಡೆದಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ. ಪಿಸ್ತೂಲ್ ಮೂಲಕ ದಾಳಿ ಮಾಡಿ, ಕಣ್ಣಿಗೆ ಖಾರದ ಪುಡಿ ಎರಚಿ ಹಣದೊಂದಿಗೆ ಇಬ್ಬರು ದರೋಡೆಕೋರರು ಪರಾರಿಯಾಗಿದ್ದಾರೆ.
ಇಂದು(ಜ.16) ಬೆಳಗಿನ ಜಾವ 10:55 ರಿಂದ 11 ಗಂಟೆಯ ಅವಧಿಯ ಒಳಗಡೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಸಿಎಂಎಸ್ ಸಂಸ್ಥೆ ಎಸ್ ಬಿಐ ಬ್ಯಾಂಕ್ ನ ಎಟಿಎಂಗೆ ಹಣ ತುಂಬಲು ಬಂದಾಗ ದರೋಡೆ ನಡೆದಿದೆ.
ಈ ದರೋಡೆ ಹಿಂದೆ ಭಾರೀ ಅನುಮಾನ ವ್ಯಕ್ತವಾಗಿದೆ. ಯಾವುದೇ ಎಟಿಎಂನಲ್ಲಿ (ATM) ಹಣ ತುಂಬುವಾಗ ಗನ್ ಮ್ಯಾನ್ ಕಡ್ಡಾಯವಾಗಿ ಇರಲೇಬೇಕು. ಆದರೆ ಇಲ್ಲಿ ಗನ್ ಮ್ಯಾನ್ ಇಲ್ಲದೇ ಹಣ ತುಂಬಲು ಬಂದಿದ್ದಾರೆ.
ದರೋಡೆಯ ವೇಳೆ, ಹಣ ತುಂಬಲು ಬಂದಿದ್ದ ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದರೋಡೆಕೋರರ ಗುಂಡಿನ ದಾಳಿಗೆ ಬಲಿಯಾದ ಗಿರಿ ವೆಂಕಟೇಶ ಮೃತದೇಹವನ್ನು ಬ್ರಿಮ್ಸ್ ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.