ನ್ಯೂಸ್ ನಾಟೌಟ್: ಚಿತ್ರನಟಿ ಉಮಾಶ್ರೀ ಯಕ್ಷಗಾನ ವೇಷದ ಬಗ್ಗೆ ಪ್ರಶಂಸೆ ಬೆನ್ನಲ್ಲೇ ಇದೀಗ ಹಿರಿಯ ಕಲಾವಿದರು ಹಾಗೂ ಅಪ್ಪಟ ಯಕ್ಷಗಾನ ಪ್ರಿಯರಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಹೊನ್ನಾವರದಲ್ಲಿ ಪಟ್ಟಾಭಿಷೇಕ ಪ್ರಸಂಗದಲ್ಲಿ ನಿರ್ವಹಿಸಿದ ಮಂಥರೆಯ ಪಾತ್ರ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಚಿತ್ರರಂಗ ಹಾಗೂ ನಾಟಕದಲ್ಲಿ ಉಮಾಶ್ರೀ ಅವರ ಕಲೆಯ ಬಗ್ಗೆ ಎಲ್ಲರೂ ಗೌರವ ವ್ಯಕ್ತಪಡಿಸಿದ್ದಾರೆ. ಆದರೆ, ಯಕ್ಷಗಾನದಲ್ಲಿ ಅವರನ್ನು ಕರೆತಂದು ಪಾತ್ರ ಮಾಡಿಸಬೇಕಿತ್ತೇ? ಎಂಬ ಪ್ರಶ್ನೆ ಎದ್ದಿದೆ. ಜತೆಗೆ ಮುಂದೆ ನೀಲಿ ಚಿತ್ರತಾರೆ ಸನ್ನಿ ಲಿಯೋನ್ ಸರದಿ ಎಂದು ಒಬ್ಬರು ಕೆಂಡ ಕಾರಿದ್ದಾರೆ.
ಯಕ್ಷಗಾನಕ್ಕೆ ಅದರದ್ದೇ ಆದ ಮೌಲ್ಯವಿದೆ.ಒಂದು ಹಂತದ ತರಬೇತಿ ಆಗದೆ ಗೆಜ್ಜೆ ಕಟ್ಟುವುದಿಲ್ಲ. ಸಹಕಲಾವಿದರ, ಸಂಘಟಕರ ಸಮ್ಮತಿಯೂ ಅದಕ್ಕೆ ಸಿಗದು. ಆದರೆ, ಯಕ್ಷಗಾನದ ಬಾಲಪಾಠವೂ ಆಗದ ಸಿನಿಮಾದವರನ್ನು, ಯಕ್ಷಗಾನೇತರ ಕಲಾವಿದರನ್ನು ಕರೆತಂದು ಯಕ್ಷಗಾನದಲ್ಲಿ ಪಾತ್ರ ಮಾಡಿಸುವ ಹೊಸ ಪರಂಪರೆ ಸೃಷ್ಟಿ ಆಗದಿರಲಿ ಎಂದು ಕರ್ಕಿ ಹಾಸ್ಯಗಾರ ಮನೆತನದ ಆನಂದ ಹಾಸ್ಯಗಾರ ಅಭಿಪ್ರಾಯಪಟ್ಟಿದ್ದಾರೆ.
ಉಮಾಶ್ರೀ ಬಗ್ಗೆ ಗೌರವ ಇದೆ. ಆದರೆ ಸಿನಿಮಾ ಇಮೇಜೇ ಮುಖ್ಯವಾಗಿ ಆ ದಿನದ ಯಾವ ಕಲಾವಿದರ ಬಗ್ಗೆ ಚಕಾರ ಎತ್ತಿಲ್ಲ. ಅನ್ಯ ಪ್ರಕಾರದ ಕಲಾವಿದರನ್ನು ನಮ್ಮ ರಂಗಭೂಮಿಗೆ ತರುವ ಸರಿಯಾದ ಕ್ರಮ ಇದಲ್ಲ. ಉಮಾಶ್ರೀಯಂತಹ ಹಿರಿಯ ನಟರನ್ನು ಆಟಕ್ಕೆ ಕರೆಯುವ ಹಿಂದಿನ ಉದ್ದೇಶ ಗಲ್ಲಾಪೆಟ್ಟಿಗೆಯ ಕಲೆಕ್ಷನ್. ಇದು ಅಪಾಯಕಾರಿ. ಹಣ ಮಾಡುವ ಏಕೈಕ ಧೋರಣೆಯ ಕೆಲ ಸಂಘಟಕರು ದಾವೂದ್ ಇಬ್ರಾಹಿಂನನ್ನು ಕರೆಸಿ ಭಸ್ಮಾಸುರನ ವೇಷ ಮಾಡಿಸುತ್ತಾರೆ ಎಂದು ಗೋಪಾಲಕೃಷ್ಣ ಭಾಗವತ್ ಗುಡುಗಿದ್ದಾರೆ.