ನ್ಯೂಸ್ ನಾಟೌಟ್: ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಇದೀಗ ಅಧಿಕೃತವಾಗಿ ತೆರೆ ಬಿದ್ದಂತಾಗಿದೆ. ಈ ಬಗ್ಗೆ ಇಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಬಿಗ್ ಬಾಸ್ ಬಗ್ಗೆ ಭಾವುಕ ಮಾತುಗಳನ್ನು ಆಡಿದ್ದಾರೆ.
ಬಿಗ್ ಬಾಸ್ನ ಕಳೆದ ಎಲ್ಲ 11 ಸೀಸನ್ ಗಳನ್ನು ನಾನು ತುಂಬಾ ಆನಂದಿಸಿದ್ದೇನೆ. ನನ್ನ ಮೇಲೆ ಪ್ರೀತಿ ಇಟ್ಟು ನನ್ನನ್ನು ಬೆಂಬಲಿಸಿದ ನಿಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಈ ಸೀಸನ್ ನ ಫಿನಾಲೆಯೇ ನನ್ನ ಬಿಗ್ಬಾಸ್ನ ಕೊನೆ ಹೆಜ್ಜೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ನನಗೆ ಒಂದು ಅದ್ಭುತ ಹಾಗೂ ಅವಿಸ್ಮರಣಿಯ ಪಯಣವಾಗಿತ್ತು. ಸಾಧ್ಯವಾದಷ್ಟು ಮಟ್ಟಿಗೆ ಶೋಗೆ ನ್ಯಾಯ ಒದಗಿಸಿ ನಿಮ್ಮನ್ನು ರಂಜಿಸಿದ್ದೇನೆ. ಇನ್ನೂ ಮುಂದೆಯೂ ರಂಜಿಸುತ್ತೇನೆ. ಅವಕಾಶ ಕೊಟ್ಟಿದ್ದ ಕಲರ್ಸ್ ಕನ್ನಡಕ್ಕೂ ನಾನು ಋಣಿಯಾಗಿದ್ದೇನೆ ಎಂದು ಹೇಳಿದ್ದಾರೆ.
ನಟ ಸುದೀಪ್ ಅವರ ನಿರೂಪಣೆಯಿಂದ ಬಿಗ್ ಬಾಸ್ ಶೋ ಸಾಕಷ್ಟು ಪ್ರೇಕ್ಷಕರನ್ನು ಹಾಗೂ ಅಭಿಮಾನಿಗಳನ್ನು ಸಂಪಾದಿಸಿದೆ. ಶನಿವಾರ ಬಿಗ್ ಬಾಸ್ ಫಿನಾಲೆಯ ಟ್ರೋಫಿಯನ್ನು ಅನಾವರಣ ಮಾಡಲಾಗಿದೆ. ಬರುವ ಭಾನುವಾರ ಫಿನಾಲೆ ನಡೆಯಲಿದೆ ಎನ್ನಲಾಗಿದೆ. ಈ ವಾರಾಂತ್ಯ ಗೌತಮಿ ಮನೆಯಿಂದ ಹೊರಹೋಗಿದ್ದು, ಭಾನುವಾರದ ಸಂಚಿಕೆಯಲ್ಲಿ ಧನರಾಜ್ ಆಚಾರ್ ಹೊರಹೋಗಿದ್ದಾರೆ. ಫಿನಾಲೆಗೆ ಹನುಮಂತು, ತ್ರಿವಿಕ್ರಮ್ ಮತ್ತು ಮೋಕ್ಷಿತಾ ಆಯ್ಕೆಯಾಗಿದ್ದಾರೆ.