ನ್ಯೂಸ್ ನಾಟೌಟ್: ನಿನ್ನೆಯಷ್ಟೇ ಸುಳ್ಯದ ಮಂಡೆಕೋಲಿನಲ್ಲಿ ಕಾಡಾನೆಗಳ ಕಾದಾಟದಲ್ಲಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಬಗ್ಗೆ ವರದಿಯಾಗಿತ್ತು.ಇದೀಗ ಮತ್ತೆ ಕಾಸರಗೋಡಿನ ಅಡೂರಿನಲ್ಲಿ ಒಂಟಿ ಸಲಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬಗ್ಗೆ ವರದಿಯಾಗಿದೆ.
ತಲ್ಪಚೇರಿ ಬಳಿ, ಕರ್ಣಾಟಕ ಅರಣ್ಯ ಪ್ರದೇಶದಲ್ಲಿ ಒಂಟಿ ಸಲಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚೆರ್ಕಳ-ಅಡೂರು ರಾಜ್ಯ ಹೆದ್ದಾರಿಯ ತಲ್ಪಚೇರಿಯಿಂದ 20 ಮೀಟರ್ ದೂರವಿರುವ ಗುಡ್ಡಡ್ಕದಲ್ಲಿ ಕಾಡಾನೆ ಕಂಡು ಬಂದಿದ್ದು,ಶರೀರದಲ್ಲಿ ಗಾಯಗಳ ಗುರುತುಗಳು ಪತ್ತೆಯಾಗಿವೆ.
ಕಾಡಿನೊಳಗೆ ವಿಪರೀತ ದುರ್ವಾಸನೆ ಗಮನಕ್ಕೆ ಬಂದ ಹಿನ್ನಲೆ ಸ್ಥಳೀಯರು ಕಾಡಿನೊಳಗೆ ಹೋಗಿ ಹುಡುಕಾಡಿದಾಗ ಆನೆಯ ಮೃತದೇಹ ಕಂಡು ಬಂತು.ಈ ವೇಳೆ ಕರ್ಣಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಅನೆಗಳು ಪರಸ್ಪರ ಜಗಳವಾಡುವ ವೇಳೆ ಗಾಯಗಳಾಗಿರಬೇಕೆಂದು ಶಂಕಿಸಲಾಗಿದೆ. ಪೋಸ್ಟ್ ಮಾರ್ಟಂ ನಂತರ ಕಾಡಿನೊಳಗೆ ದಫನಗೈಯ್ಯಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.