ನ್ಯೂಸ್ ನಾಟೌಟ್:ಬೆಕ್ಕೊಂದು ಬಾವಿಗೆ ಬಿದ್ದಿದೆ ಎಂದು ಅದರ ರಕ್ಷಣೆಗಾಗಿ ಬಾವಿಗಿಳಿದ ಅಗ್ನಿಶಾಮಕ ದಳದ ಸಿಬಂದಿಗಳಿಗೆಯೇ ಬೆಕ್ಕು ಕಚ್ಚಿ ಗಾಯಗೊಳಿಸಿರುವ ಘಟನೆ ಬಗ್ಗೆ ಪುತ್ತೂರಿನಿಂದ ವರದಿಯಾಗಿದೆ.
ಪುತ್ತೂರಿನ ತೆಂಕಿಲ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಅಗ್ನಿಶಾಮಕ ದಳದ ಸಿದ್ಧರೂಢ ಮತ್ತು ಮೌನೇಶ್ ಗಾಯಗೊಂಡವರೆಂದು ತಿಳಿದು ಬಂದಿದೆ.ಅವರಿಬ್ಬರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರಿನ ತೆಂಕಿಲ ಬಳಿಯ ಲಕ್ಷ್ಮೀ ಅವರ ಮನೆಯ ಬಾವಿಗೆ ಬೆಕ್ಕು ಬಿದ್ದಿತ್ತು.ಈ ವೇಳೆ ಬೆಕ್ಕಿನ ರಕ್ಷಣೆಗೆ ಅಗ್ನಿಶಾಮಕ ದಳದ ಸಿಬಂದಿ ಬಂದಿದ್ದರು. ಬಾವಿಯಲ್ಲಿ ಬೆಕ್ಕಿರುವುದನ್ನು ಖಚಿತಪಡಿಸಿಕೊಂಡು ರಕ್ಷಣೆ ಮಾಡಲು ಮುಂದಾದರು.ಅಂತೆಯೇ ಬಾವಿಯೊಳಗಡೆ ಸಿದ್ಧರೂಢ ಮತ್ತು ಮೌನೇಶ್ ಅವರು ಇಳಿದರು.ಬಾವಿಯಲ್ಲಿ ಒಂದು ಬಿಲದೊಳಗೆ ಬೆಕ್ಕು ಅವಿತುಕೊಂಡಿತ್ತು. ಬೆಕ್ಕನ್ನು ಹಿಡಿಯಲು ಪ್ರಯತ್ನಿಸಿದಾಗ ಏಕಾಏಕಿ ಬೆಕ್ಕು ಅಗ್ನಿಶಾಮಕ ದಳದ ಇಬ್ಬರ ಮೇಲೆ ಕಚ್ಚಿ ಗಾಯಗೊಳಿಸಿದೆ.
ಸುಮಾರು ಏಳು ನಿಮಿಷಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿಯ ಕೈಯನ್ನು ಬೆಕ್ಕು ಕಚ್ಚಿ ಹಿಡಿದಿತ್ತು ಎನ್ನಲಾಗಿದೆ. ಅನಂತರ ಗಾಯದ ನಡುವೆಯೂ ಅಗ್ನಿಶಾಮಕ ಸಿಬಂದಿಯವರು ಬೆಕ್ಕನ್ನು ರಕ್ಷಿಸಿ ರಕ್ಷಣಾ ಚೀಲದ ಮೂಲಕ ತಂದು ಮೇಲಕ್ಕೆ ಬಿಟ್ಟರು.ಗಾಯದ ನಡುವೆಯೂ ಬೆಕ್ಕನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಕ್ಕೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.