ನ್ಯೂಸ್ ನಾಟೌಟ್ : ಮೊಬೈಲ್ ಎಂಬ ಮಾಯೆ ಮಕ್ಕಳನ್ನು ಬಲಿ ಪಶು ಮಾಡುತ್ತಿದೆ.ಇದಕ್ಕೆ ಪ್ರತ್ಯಕ್ಷ ಉದಾಹರಣೆ ಈ ಬಾಲಕ. ಹೌದು, 13 ವರ್ಷದ ಬಾಲಕನೋರ್ವ ಮೊಬೈಲ್ ಗೆ ದಾಸನಾಗಿ ಕೊನೆಗೆ ನೇಣಿಗೆ ಶರಣಾಗಿರುವ ಆತಂಕಕಾರಿ ಘಟನೆ ಬಗ್ಗೆ ವರದಿಯಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಗೊಲ್ಲರಹಟ್ಟಿಯ ರತ್ನನಗರದಲ್ಲಿ ಈ ಘಟನೆ ನಡೆದಿದ್ದು,ಪೋಷಕರನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಆತ್ಮಹತ್ಯೆಗೆ ಶರಣಾದ ಬಾಲಕನ ಹೆಸರು ಧ್ರುವ ಎಂದು. ಈತನಿಗೆ ಮೊಬೈಲ್ ಗೀಳು ಹೆಚ್ಚು ಇತ್ತು ಎನ್ನಲಾಗಿದೆ.ಈತ ಮನೆಯವರ ಮಾತು ಕೇಳದೆ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದ ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಹೀಗಾಗಿ ಮನ ನೊಂದು 9 ವರ್ಷದ ತಂಗಿಯ ಮುಂದೆಯೇ ಉಡದಾರದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಂಗಳವಾರ ಪೋಷಕರು ಕೆಲಸಕ್ಕೆ ತೆರಳಿದ್ದರು. ಶಾಲೆ ಮುಗಿಸಿ ಬಂದ ಅಣ್ಣ-ತಂಗಿ ಮಾತ್ರ ಮನೆಯಲ್ಲಿದ್ದರು. ಆಗ ಬಾಲಕ ಪ್ಯಾಂಟ್ ತೆಗೆದು ಸೊಂಟದ ಉಡದಾರ ಫ್ಯಾನ್ಗೆ ಕಟ್ಟಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಂಜೆ 7 ಗಂಟೆಯ ಸುಮಾರಿಗೆ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ಉಡದಾರ ಕುತ್ತಿಗೆಗೆ ಬಿಗಿದು, ತುಂಡಾಗಿ ಬಾಲಕ ಕೆಳಗೆ ಬಿದ್ದಿದ್ದಾನೆ. ಅಣ್ಣ ಏನು ಮಾಡಿಕೊಳ್ಳುತ್ತಿದ್ದಾನೆ ಎಂಬ ಅರಿವು ಇಲ್ಲದೇ ತಂಗಿ ಸುಮ್ಮನೆ ನೋಡುತ್ತಿದ್ದಳು. ಬಾಲಕ ಕೆಳಗೆ ಬಿದ್ದ ಸಮಯಕ್ಕೆ ಕೆಲಸ ಮುಗಿಸಿ ತಾಯಿ ಬಂದಿದ್ದಾರೆ. ಘಟನೆ ನೋಡಿ ಆತಂಕಗೊಂಡ ತಾಯಿ ಅಕ್ಕಪಕ್ಕದವರ ಸಹಾಯ ಪಡೆದು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆತನನ್ನು ಬದುಕಿಸಲಾಗಲಿಲ್ಲ.