ನ್ಯೂಸ್ ನಾಟೌಟ್: ನನ್ನ ವಿರುದ್ಧ ಏನೇ ದಾಖಲೆ, ವಿಡಿಯೋಗಳಿದ್ದರೂ ಒಂದು ಕ್ಷಣವೂ ಯೋಚನೆ ಮಾಡದೆ, ತಕ್ಷಣ ಬಿಡುಗಡೆ ಮಾಡಲಿ. ಶುಭ ಮುಹೂರ್ತಕ್ಕೆ ಕಾಯುವುದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸವಾಲ್ ಹಾಕಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಲೋಚಿಸಿ ಬೆಂಗಳೂರಿನಲ್ಲಿರುವ ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲಿಂದು ಸಮಾಲೋಚನ ಸಭೆ ನಡೆಸಲಾಯಿತು. “ವಿಪಕ್ಷಗಳೊಂದಿಗೆ ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ಸಾಕ್ಷ್ಯಾಧಾರ ಇದೆ, ಬಿಡುಗಡೆ ಮಾಡ್ಲಾ?” ಅನ್ನೋ ಯತ್ನಾಳ್ ಹೇಳಿಕೆಗೆ ವಿಜಯೇಂದ್ರ ಪ್ರತಿಕ್ರಿಯೆ ನೀಡಿದರು.
ಈ ಬಗ್ಗೆ ವಿಜಯೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ, “ಯತ್ನಾಳ್ ಒಂದು ಕ್ಷಣವೂ ಯೋಚನೆ ಮಾಡೋದು ಬೇಡ. ನನ್ನ ವಿರುದ್ಧ ದಾಖಲೆ, ವೀಡಿಯೋ ಇದ್ದರೆ ಬಿಡುಗಡೆ ಮಾಡಲಿ. ಕಾಂಗ್ರೆಸ್ ಹೊಂದಾಣಿಕೆ ನನಗೆ ಅವಶ್ಯಕತೆ ಇಲ್ಲ. ಆದರೆ ಹೊಂದಾಣಿಕೆ ರಾಜಕಾರಣ ಅಂತಾ ಪಕ್ಷ ಸಂಘಟನೆಗೆ ಪೆಟ್ಟು ಕೊಡ್ತಿದ್ದಾರೆ. ಅವರಿಗೆ ಯಾವುದೇ ರೀತಿಯಲ್ಲಿ ಒಳ್ಳೆಯದು ಆಗಲ್ಲ. ಆದರೆ ಬಿಗಿ ಕ್ರಮ ಆಗಬೇಕು ಅನ್ನೋದು ಕಾರ್ಯಕರ್ತರ ಅಪೇಕ್ಷೆ. ವಿಜಯೇಂದ್ರ ಬದಲಾವಣೆ ಮಾಡಲಿ ಅಂತ ಅವರ ಜೊತೆ ಇನ್ನೂ ಹತ್ತು ಜನರನ್ನು ಸೇರಿಸಿಕೊಳ್ಳಲಿ, ನನಗೇನು ತೊಂದರೆ ಇಲ್ಲ. ಈಗ್ಲೂ ನಾನು ಮನವಿ ಮಾಡುತ್ತೇನೆ ಪಕ್ಷದ ಕಾರ್ಯಕರ್ತರಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ. ಯತ್ನಾಳ್ ಅವರು ಯಡಿಯೂರಪ್ಪ ಮತ್ತೆ ವಿಜಯೇಂದ್ರಗೆ ಬೈಯ್ಯೋದೆ ಒಂದು ಪದವಿ ಅಂದ್ಕೊಂಡಿದ್ದಾರೆ. ಇವತ್ತು ಮಾಜಿ ಶಾಸಕರು ಬಂದಿದ್ದರು, ಇದರ ಬಗ್ಗೆ ಅವರೆಲ್ಲ ನನಗೆ ಹೇಳಿದ್ದಾರೆ. ನಾನು ಅವರಿಗೆ ಇದನ್ನು ಬದಿಗೊತ್ತಿ, ಪಕ್ಷ ಸಂಘಟನೆ ಮಾಡಿ ಅಂತಷ್ಟೇ ಹೇಳಿದ್ದೇನೆ” ಎಂದು ತಿಳಿಸಿದ್ದಾರೆ.
Click