- +91 73497 60202
- [email protected]
- December 18, 2024 8:55 PM
ನ್ಯೂಸ್ ನಾಟೌಟ್ :ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಿಐಪಿ ಪಾಸ್ ಕೊಡಿಸುವುದಾಗಿ ವಂಚನೆ ಎಸಗಿದ್ದಲ್ಲದೆ, ಕರ್ನಾಟಕ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಆಂಧ್ರ ಪ್ರದೇಶ ಮುಖ್ಯಮಂತ್ರಿಗಳ ಕಾರ್ಯಾಲಯದ ಅಧಿಕಾರಿಗಳನ್ನೇ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ತುಮಕೂರಿನಲ್ಲಿ ಬಂಧಿಸಲಾಗಿದೆ. ಬೆಂಗಳೂರಿನ ಯಲಹಂಕ ಮೂಲದ ಮಾರುತಿ (30) ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದಾನೆ. ಬಂಧಿತ ಮಾರುತಿ ವೃತ್ತಿಯಲ್ಲಿ ಸಿವಿಎಲ್ ಕಂಟ್ರಾಕ್ಟರ್ ಆಗಿದ್ದಾನೆ ಎನ್ನಲಾಗಿದೆ. ಈತ ಅಕ್ರಮವಾಗಿ ಹಣ ಸಂಪಾದನೆ ಮಾಡಲು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾನೆ. ತನ್ನ ಲ್ಯಾಪ್ಟಾಪ್ನಲ್ಲಿ ಗೃಹ ಸಚಿವ ಪರಮೇಶ್ವರ್ ಹೆಸರಿನ ನಕಲಿ ಲೇಟರ್ ಹೆಡ್ ಕೂಡ ಇಟ್ಟುಕೊಂಡಿದ್ದ ಎನ್ನಲಾಗಿದೆ. ಪರಮೇಶ್ವರ್ ಹೆಸರಿನ ನಕಲಿ ಲೇಟರ್ ಹೆಡ್ ಇಟ್ಟುಕೊಂಡಿದ್ದ ಆರೋಪಿ ತಿರುಪತಿಗೆ ಹೋಗುವ ಭಕ್ತರನ್ನ ಸಂಪರ್ಕಿಸಿ, ವಿಐಪಿ ದರ್ಶನದ ಪಾಸ್ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದ. ಜತೆಗೆ, ಅವರಿಂದ 6 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿ ವರಗೆ ಹಣ ಪಡೆದು ನಕಲಿ ಲೇಟರ್ ಹೆಡ್ ಕೊಟ್ಟು ಕಳುಹಿಸುತ್ತಿದ್ದ.ಕೆಲ ದಿನಗಳ ಹಿಂದೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳ ಕಚೇರಿಗೆ ಕರೆ ಮಾಡಿದ್ದ ಮಾರುತಿ, ‘ನಾನು ಕರ್ನಾಟಕ ಗೃಹ ಸಚಿವ ಪರಮೇಶ್ವರ್’ ಎಂದು ಮಾತನಾಡಿದ್ದ. ತನಗೆ ಬೇಕಾದ ಕುಟುಂಬವೊಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಿದೆ. ಅವರಿಗೆ ದರ್ಶನಕ್ಕೆ ಬೇಕಾದ ಅನುವುಮಾಡಿಕೊಡಿ. ಇಲ್ಲದಿದ್ದರೆ ನಿಮ್ಮನ್ನು ಅಮಾನತ್ತು ಮಾಡಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದ. ಅಲ್ಲದೇ, ನಕಲಿ ಲೆಟರ್ ಹೆಡ್ ಒಂದನ್ನು ಆಂಧ್ರ ಸಿಎಂ ಕಚೇರಿಯ ನಂಬರ್ ಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದ. ಕರ್ನಾಟಕ ಗೃಹ ಸಚಿವರದ್ದು ಎನ್ನಲಾದ ಲೆಟರ್ ಹೆಡ್ ಬಗ್ಗೆ ಆಂಧ್ರ ಸಿಎಂ ಕಚೇರಿ ಸಿಬ್ಬಂದಿ ಪುನರ್ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಗೃಹ ಸಚಿವ ಪರಮೇಶ್ವರ್ ಕಚೇರಿಗೆ ಕರೆ ಮಾಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ, ಮಾರುತಿ ನೀಡಿರುವುದು ನಕಲಿ ಲೆಟರ್ ಎಂಬುದು ಗೊತ್ತಾಗಿದೆ. ಕೂಡಲೇ ಆಂಧ್ರ ಸಿಎಂ ಕಚೇರಿ ಅಧಿಕಾರಿಗಳು ಗೃಹ ಇಲಾಖೆ ಗಮನಕ್ಕೆ ತಂದಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಎಚ್ಚೆತ್ತ ಗೃಹ ಸಚಿವ ಪರಮೇಶ್ವರ್, ವಿಶೇಷ ಕರ್ತವ್ಯಾಧಿಕಾರಿ ಡಾ. ನಾಗಣ್ಣಗೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಅದರಂತೆ ತುಮಕೂರು ನಗರ ಠಾಣೆಗೆ ನಾಗಣ್ಣ ದೂರು ನೀಡಿದ್ದಾರೆ. ನಾಗಣ್ಣ ದೂರು ಆಧರಿಸಿ ಪ್ರಕರಣ ದಾಖಲಿಸಿದ ಪೊಲೀಸರು, ಬೆಂಗಳೂರಿನ ಯಲಹಂಕ ನ್ಯೂಟೌನ್ ಬಳಿಯಿದ್ದ ಆರೋಪಿ ಮಾರುತಿಯನ್ನು ಬಂಧಿಸಿದ್ದಾರೆ.ಆರೋಪಿಯು ಹಲವರಿಗೆ ಇದೇ ರೀತಿ ವಂಚಿಸಿರುವ ಶಂಕೆ ವ್ಯಕ್ತವಾಗಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ