ನ್ಯೂಸ್ ನಾಟೌಟ್: ತಮಿಳುನಾಡಿಗೆ ಅಪ್ಪಳಿಸಿರುವ ಫೆಂಗಲ್ ಚಂಡಮಾರುತ ಹಲವು ಅವಾಂತರಗಳನ್ನ ತಂದೊಡ್ಡಿದೆ. 90 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಚೆನ್ನೈ ಮತ್ತು ಇತರ ಪ್ರದೇಶಗಳಲ್ಲಿ ಭಾರಿ ಮಳೆ ಉಂಟಾಗಿದೆ, ಹಲವು ಪ್ರದೇಶಗಳು ಜಲಾವೃತವಾಗಿದೆ.
ಚೆನ್ನೈಯಲ್ಲಿ ವಿಮಾನ, ರೈಲು, ಬಸ್ ಸೇರಿದಂತೆ ಸಾರ್ವಜನಿಕ ಸಂಚಾರ ವ್ಯವಸ್ಥೆ ವ್ಯತ್ಯಯವಾಗಿದೆ. ಚೆನ್ನೈ ಏರ್ ಪೋರ್ಟ್ನಲ್ಲಿ ವಿಮಾನವೊಂದು ಲ್ಯಾಂಡಿಂಗ್ ಗಾಗಿ ಪರದಾಡಿದ ಪ್ರಸಂಗವೂ ಕಂಡುಬಂದಿದೆ.
ಚೆನ್ನೈನಲ್ಲಿ ಸಂಭವಿಸಿದ ಮಳೆಯಿಂದಾಗಿ ವಿವಿಧೆಡೆ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮೂವರಲ್ಲಿ ಓರ್ವ ವಲಸೆ ಕಾರ್ಮಿಕ, ಮತ್ತೊಬ್ಬರು ಎಟಿಎಂನಿಂದ ಹಣ ಡ್ರಾ ಮಾಡಲು ಹೋದಾಗ ದುರಂತ ನಡೆದಿದ್ದು, ಮತ್ತೊಬ್ಬರು ಹೆಣವಾಗಿ ತೇಲುತ್ತಿರುವುದು ಕಂಡುಬಂದಿದೆ. ಭಾರತೀಯ ಸೇನೆ 100ಕ್ಕೂ ಹೆಚ್ಚು ಜನರನ್ನ ರಕ್ಷಣೆ ಮಾಡಿದೆ.
ಮಳೆಯ ಅವಾಂತರದಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪುದುಚೇರಿಯ ಕೃಷ್ಣನಗರದ ಕೆಲವು ಪ್ರದೇಶಗಳಲ್ಲಿ 5 ಅಡಿಗಳಷ್ಟು ಎತ್ತರಕ್ಕೆ ನೀರು ಹರಿಯುತ್ತಿದ್ದು, ಸುಮಾರು 500 ಮನೆಗಳು ಜಲಾವೃತವಾಗಿವೆ. ಎನ್ಡಿಆರ್ಎಫ್ ಹಾಗೂ ಸ್ಥಳೀಯ ರಕ್ಷಣಾ ಪಡೆಗಳೊಂದಿಗೆ ಭಾರತೀಯ ಸೇನೆ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ.