ನ್ಯೂಸ್ ನಾಟೌಟ್: ಇದೀಗ ಹಲವು ಕಡೆ ಸಹಕಾರಿ ಸಂಘದ ಚುನಾವಣೆಗಳದ್ದೇ ಮಾತು. ರೈತರ ಬೆನ್ನೆಲುಬಾಗಿರುವ ಸಹಕಾರಿ ಸಂಘಗಳ ಚುನಾವಣೆ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ. ಈ ಹಿನ್ನೆಲೆಯಲ್ಲಿ ವಿಶೇಷ ವರದಿಯನ್ನು ‘ನ್ಯೂಸ್ ನಾಟೌಟ್’ ಸಂಸ್ಥೆ ಮಾಡುತ್ತಿದೆ. ಮೊದಲನೇ ಸಂಚಿಕೆಯಲ್ಲಿ ಸುಳ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬೆಳವಣಿಗೆ, ಆರ್ಥಿಕ ಪ್ರಗತಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ರೈತರಿಗೆ ನೆರವಾದ ರೀತಿ ಸೇರಿದಂತೆ ಹಲವಾರು ವಿಚಾರದ ಬಗ್ಗೆ ಅಕ್ಷರ ರೂಪದಲ್ಲಿ ಬೆಳಕಿಗೆ ತರುವ ಪ್ರಯತ್ನವನ್ನು ನಡೆಸಿದೆ. ಈ ಬಗ್ಗೆ ಸಂಸ್ಥೆಯ ಅಧ್ಯಕ್ಷ ವಿಕ್ರಂ ಅಡ್ಪಂಗಾಯ ಅವರು ಸಂದರ್ಶನಲ್ಲಿ ಹೇಳಿದ ವಿಚಾರದ ಪೂರ್ಣ ಪಾಠ ಇಲ್ಲಿದೆ ಓದಿ…
ನಮ್ಮ ಸುಳ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆಯಾದದ್ದು 1914ರಲ್ಲಿ, ಈ ಸಂಸ್ಥೆ ಆರಂಭವಾದಾಗ 24 ಜನ ಇದ್ದರು, ಆಗ ನಮ್ಮ ಮೂಲ ಬಂಡವಾಳ ಇದ್ದದ್ದು 23 ರೂಪಾಯಿ. ಪ್ರತಿ ಆದಿತ್ಯವಾರ ಸಂಘದ ಅಧ್ಯಕ್ಷರ ಮನೆಯಲ್ಲಿ ಸಭೆ ಆಗುತ್ತಿತ್ತು. ಆಗಿನ ಅಧ್ಯಕ್ಷರು ಮಹಾಲಿಂಗಯ್ಯ. ಪ್ರಥಮ ಅಧ್ಯಕ್ಷರು. ಅದಾದ ಬಳಿಕ ಸಂಘ ಹಂತಹಂತವಾಗಿ ಬೆಳೆದುಕೊಂಡು ಬಂದಿತು. ಈ ಪ್ರಸ್ತುತ 4851 ಮಂದಿ ಸದಸ್ಯರಿದ್ದಾರೆ. ಸಹಕಾರ ಭಾರತೀ ನೇತೃತ್ವದ ಮಂಡಳಿ ರಚನೆಯಾಗಿ 11 ತಿಂಗಳಾಗಿವೆ. ಜನವರಿ 10ಕ್ಕೆ ಸಂಘ ರಚನೆಯಾಗಿ 1 ವರ್ಷವಾಗಲಿದೆ.
ಈ ಹಿಂದಿನ ಆಡಳಿತ ವ್ಯವಸ್ಥೆಯಲ್ಲಿ ಇದ್ದದ್ದು ಗ್ರೌಂಡ್ ಫ್ಲೋರ್ ಮತ್ತು ಸೆಕೆಂಡ್ ಫ್ಲೋರ್ ನಿರ್ಮಿಸುವ ಗುರಿ. ಆದರೆ ನಮ್ಮ ತಂಡ ಆಡಳಿತ ವಹಿಸಿಕೊಂಡ ಮೇಲೆ ನಾವು ಫ್ಲೋರ್ ಸಂಖ್ಯೆಗಳನ್ನು ಹೆಚ್ಚಿಸಿದೆವು. ಗ್ರೌಂಡ್ ಫ್ಲೋರ್ ನಲ್ಲಿ ವಾಣಿಜ್ಯ ಸಂಕೀರ್ಣ, ಫಸ್ಟ್ ಫ್ಲೋರ್ ನಲ್ಲಿ ಸಂಘದ ಕಚೇರಿ ಹಾಗೂ 3ನೇ ಫ್ಲೋರ್ ನಲ್ಲಿ ಸಭಾ ಭವನದ ನಿರ್ಮಾಣಗಳನ್ನು ಮಾಡಲು ಚಾಲನೆ ನೀಡಿದ್ದೇವೆ. ಕೆಲಸಗಳು ಭರದಿಂದ ನಡೆಯುತ್ತಿವೆ. ವಾಣಿಜ್ಯ ಸಂಕೀರ್ಣದಿಂದ ಕನಿಷ್ಟ ಎಂದರೂ ಸಂಘಕ್ಕೆ ತಿಂಗಳಿಗೆ 1 ಲಕ್ಷ ರೂ.ವಿನಷ್ಟು ಆದಾಯ ಬರಲಿದೆ. ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಸಂಘದ ಮೆಟ್ಟಿಲು ಹತ್ತುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಲಿಫ್ಟ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಸ್ವತಃ ನಾನೇ ಸಿವಿಲ್ ಇಂಜಿನೀಯರ್ ಆಗಿರುವುದರಿಂದ ಸೂಕ್ತ ಪ್ಲಾನ್ ಮಾಡಿಕೊಂಡಿದ್ದೇನೆ. ನನಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸುದರ್ಶನ್ ಸೂರ್ತಿಲ ಸಾಥ್ ನೀಡಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಇದೆಲ್ಲವನ್ನು ಕಂಪ್ಲೀಟ್ ಆಗಿ ಮುಗಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ನಾನು ಅಧಿಕಾರ ಸ್ವೀಕರಿಸುವ ಸಮಯದಲ್ಲಿ ಕಾಮಗಾರಿ ಆಮೆಗತಿಯಲ್ಲಿತ್ತು. ಆದರೆ ಇದನ್ನು ಬೇಗ ಮುಗಿಸಬೇಕು ಎಂದು ಚಿಂತನೆ ಮಾಡಿದೆವು. ಅದರಂತೆ ಮುಗಿಸುವ ಹಂತದಲ್ಲಿದ್ದೇವೆ.
ಇಲ್ಲಿನ ಸುಳ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನವನ್ನು ಕಿರಿಯ ವಯಸ್ಸಿನಲ್ಲಿ ವಹಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ರೈತರಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಸುಳ್ಯದ ಭಾಗದಲ್ಲಿ ಅಡಿಕೆಗೆ ಹಳದಿ ಹಾಗೂ ಎಲೆಚುಕ್ಕೆ ರೋಗ ಬಂದು ರೈತರು ಕಂಗಾಲಾಗಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ಅಡಿಕೆಯಿಂದ ಏನೂ ಸಿಗದ ಪರಿಸ್ಥಿತಿ ಬರಲಿದೆ. ಇಂತಹ ಸಂದರ್ಭದಲ್ಲಿ ರೈತರು ತಮ್ಮ ಭೂಮಿಯಲ್ಲಿ ಪರ್ಯಾಯ ಬೆಳೆಯನ್ನು ಬೆಳೆಯುವುದಕ್ಕೆ ತಯಾರಿ ಮಾಡಿಕೊಳ್ಳಬೇಕಿದೆ. ಪರ್ಯಾಯ ಬೆಳೆಗೆ ಅವರು ಹೊಂದಿಕೊಳ್ಳಬೇಕಾದರೆ ಕೆಲವು ವರ್ಷಗಳು ಬೇಕಾಗಬಹುದು. ಈ ಹಂತದಲ್ಲಿ ಕೃಷಿಕರನ್ನೇ ಅವಲಂಭಿಸಿರುವ ನಮ್ಮ ಸಹಕಾರಿ ಸಂಘವನ್ನು ನಡೆಸುವುದು ಕಷ್ಟವಾಗಬಹುದು.ಸಂಘಕ್ಕೆ ಬರುವ ಆದಾಯ ಕುಸಿಯುತ್ತದೆ. ಸಾಲ ಕೊಡುವುದಕ್ಕೂ ಸಾಧ್ಯವಾಗುವುದಿಲ್ಲ. ಇದರಿಂದ ಒಟ್ಟಾರೆಯಾಗಿ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಬಹುದು.
ಹೀಗಾಗಿ ಸಂಘದ ಹಿತ ಕಾಯುವುದಕ್ಕೆ ನಾಲ್ಕು ಎಕರೆ ಭೂಮಿಯನ್ನು ಅಜ್ಜಾವರ ಭಾಗದಲ್ಲಿ ಖರೀದಿಸುವುದಕ್ಕೆ ನಿರ್ಧರಿಸಿದ್ದೇನೆ. ಖರೀದಿಸಿದ ಭೂಮಿಯಲ್ಲಿ ಪೆಟ್ರೋಲ್ ಪಂಪ್, ಗ್ಯಾಸ್ ಏಜೆನ್ಸಿ, ಹೋಟೆಲ್ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಾವು ಜಾರಿಗೆ ತರಬಹುದು. ಈ ಹಿನ್ನೆಲೆಯಲ್ಲಿ ನಮ್ಮ ಎಲ್ಲ ಚಿಂತನೆಗಳು ಸಾಕಾರಗೊಳ್ಳುವತ್ತ ಪ್ರಮಾಣಿಕ ಪ್ರಯತ್ನ ನಡೆಯುತ್ತಿದೆ. ರೈತರ ಟರ್ನ್ ಓವರ್ ಕಡಿಮೆ ಆದರೂ ನಮ್ಮ ಸಂಘಕ್ಕೆ ಆದಾಯ ಬರುತ್ತಲೇ ಇರುತ್ತದೆ ಅನ್ನುವುದು ನಮ್ಮ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ರೈತರಿಗೆ ತ್ವರಿತ ಗತಿಯಲ್ಲಿ ಸಾಲ ನೀಡುವುದಕ್ಕೆ ನಾವು ಚಾಲನೆ ನೀಡಿದ್ದೇವೆ. ಇದರಿಂದ ರೈತರು ಬ್ಯಾಂಕ್ ಗಳು ಅಲೆದಾಟ ಮಾಡುವಂತಹದ್ದು ತಪ್ಪಿದಂತಾಗಿದೆ. ವಾಹನ ಸಾಲಗಳು ಅಪ್ ಟು 20 ಲಕ್ಷದ ವರೆಗೆ ಕೇವಲ ಅರ್ಧ ಗಂಟೆಯಲ್ಲಿ ನೀಡುತ್ತೇವೆ. ಅಡಿಕೆ ಕೊಯ್ಯುವುದಕ್ಕೆ , ಮದ್ದು ಬಿಡುವುದಕ್ಕೆ ವಿಟ್ಲದಲ್ಲಿ ಹಿಂಗಾರ ಮಾದರಿಯಲ್ಲಿ ಫೈಬರ್ ದೋತಿಗಳನ್ನು ಕೊಟ್ಟು ರೈತರಿಗೆ ನೆರವಾಗುತ್ತಿದ್ದೇವೆ.
ಸುಳ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹೈಲೈಟ್ಸ್
- ಒಟ್ಟು 300 ಕೋಟಿ ರೂ.ವಿಗೂ ಹೆಚ್ಚು ವಾರ್ಷಿಕ ವಹಿವಾಟು
- ಕಳೆದ ವರ್ಷ 1 ಕೋಟಿ 35 ಲಕ್ಷ ರೂ. ವಿನಷ್ಟು ಲಾಭ
- ಒಟ್ಟು 54 ಕೋಟಿ ಫಿಕ್ಸೆಡ್ ಡೆಪಾಸಿಟ್ ಹೊಂದಿದೆ
- ಒಟ್ಟು 77 ಕೋಟಿ ದುಡಿಯುವ ಬಂಡವಾಳ ಇದೆ
- ಒಟ್ಟು 54 ಕೋಟಿ ಸಾಲ ನೀಡಲಾಗಿದೆ
- ಒಟ್ಟು 3 ಕೋಟಿ 15 ಲಕ್ಷ ಷೇರು ವಹಿವಾಟು ಹೊಂದಿದೆ