ನ್ಯೂಸ್ ನಾಟೌಟ್: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಆಧಾರ ಸ್ಥಂಭ. ಹಲವಾರು ವರ್ಷಗಳಿಂದ ಜನರ ಒಡನಾಡಿಯಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗಾಗಿ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ರೈತರ ಜೊತೆಗೆ ನಿರಂತರ ಸಂಪರ್ಕ ಇದ್ದುಕೊಂಡು ಕಷ್ಟನಷ್ಟಗಳನ್ನು ಆಲಿಸುವಂತಹ, ಸ್ಪಂದಿಸುವಂತಹ ಕೆಲಸಕ್ಕೂ ಈ ಸಂಘಗಳು ಮುಂದಾಗುತ್ತಿವೆ. ಸದ್ಯ ವಿವಿಧ ಕಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಿವಿಧ ಭಾಗದ ಆಯ್ದ ಸಂಘಗಳು ನಡೆದು ಬಂದ ಹಾದಿಯ ಬಗ್ಗೆ ಸರಣಿ ವಿಶೇಷ ವರದಿಯನ್ನು ‘ನ್ಯೂಸ್ ನಾಟೌಟ್’ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತಿದೆ. ಇದೀಗ ಸರಣಿಯ 2ನೇ ಭಾಗವಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೆಳವಣಿಗೆಯ ಬಗ್ಗೆ ಅಲ್ಲಿನ ಅಧ್ಯಕ್ಷರಾಗಿರುವ ತಾರಾನಾಥ ಕಾಯರ್ಗ ಅವರು ಉಲ್ಲೇಖಿಸಿರುವ ಅಂಶಗಳತ್ತ ನೋಡೋಣ, ತಾರಾನಾಥ್ ಕಾಯರ್ಗ ಅವರು ಹೇಳಿರುವ ವಿಚಾರಗಳು ಇಲ್ಲಿದೆ ಓದಿ..
ಇತ್ತೀಚೆಗೆ ನಮ್ಮ ಅಧ್ಯಕ್ಷತೆಯಲ್ಲಿ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ನಾವೆಲ್ಲರು ಸೇರಿ ಮಾಡಿದೆವು. ಈ ಸಭೆಯು ಅತ್ಯಂತ ಯಶಸ್ವಿಯಾಗಿ ನಡೆಯಿತು. ನಮ್ಮ ಆಡಳಿತ ಮಂಡಳಿ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಯಿತು. ನಮ್ಮೆಲ್ಲರ ಸದಸ್ಯರ ಸಹಕಾರದಿಂದ 22ನೇ ಬಾರಿಗೆ ಎ ದರ್ಜೆಯ ಆಡಿಟ್ ವರ್ಗೀಕರಣ ಮಾಡಿದ್ದೇವೆ. ಶೇ.99.22ರಷ್ಟು ಸಾಲ ವಸೂಲಾತಿಯಾಗಿದೆ. 3451 ಸದಸ್ಯರಿದ್ದಾರೆ. ರೂ.5.52 ಕೋಟಿ ರೂ. ಪಾಲು ಬಂಡವಾಳ ಮತ್ತು 36.39 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದೇವೆ. ಸಾಲ ನೀಡುವ ವಿಚಾರದಲ್ಲೂ ನಾವು ಯಾರಿಗೂ ಸತಾಯಿಸುವ ಪ್ರಶ್ನೆ ಇಲ್ಲ. ಅರ್ಹತೆ ಇದ್ದವರಿಗೆ ಸರಿಯಾದ ಸಮಯಕ್ಕೆ ಸಾಲ ನೀಡಿದ್ದೇವೆ. ಇದುವರೆಗೆ ಒಟ್ಟು 55.41 ಕೋಟಿ ರೂ. ಸಾಲ ವಿತರಿಸಿದ್ದೇವೆ. ವರ್ಷಾಂತ್ಯಕ್ಕೆ ರೂ. 52.34 ಕೋಟಿ ರೂ. ಹೊರೆಬಾಕಿ ಇದೆ. ವಾರ್ಷಿಕವಾಗಿ ನಾವು 365.50 ಕೋಟಿ ರೂ. ವ್ಯವಹಾರ ಮಾಡಿದ್ದೇವೆ. ಇದರಲ್ಲಿ 1.52 ಕೋಟಿ ರೂ. ಲಾಭವನ್ನುಗಳಿಸಿದ್ದೇವೆ. ವರ್ಷಾಂತ್ಯಕ್ಕೆ ಕೇಂದ್ರ ಬ್ಯಾಂಕಿನ ಹೊರಬಾಕಿ ಸಾಲ ರೂ. 30.69 ಕೋಟಿ ಇದೆ. ಇಂದು ನಮ್ಮ ಸಂಘ ಇಷ್ಟೊಂದು ಕಾರ್ಯ ನಿರ್ವಹಿಸುವುದಕ್ಕೆ ಪ್ರಮುಖ ಕಾರಣ ನಮ್ಮ ಸದಸ್ಯರು, ಠೇವಣಿದಾರರು ಹಾಗೂ ಗ್ರಾಹಕರಾಗಿದ್ದಾರೆ. ನಿಜವಾಗಿಯೂ ಅವರೆಲ್ಲರನ್ನೂ ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ನಮ್ಮ ಸಂಘ 13ನೇ ಬಾರಿಗೆ ದ.ಕ. ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ‘ಅತ್ಯುತ್ತಮ ಸಹಕಾರ ಸಂಘ’ ಪ್ರಶಸ್ತಿ ಪಡೆದುಕೊಂಡಿದೆ.
ನಮ್ಮ ಸಂಘ ಸವಣೂರು, ಪುಣ್ಚಪ್ಪಾಡಿ, ಕುದ್ಮಾರು, ಬೆಳಂದೂರು ಮತ್ತು ಕಾಯಿಮಣ ಗ್ರಾಮಗಳನ್ನು ಒಳಗೊಂಡಿದೆ. ನಾವು ರೈತರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಯೋಜಿಸಿದ್ದೇವೆ. ಅದರಲ್ಲಿ ಮುಖ್ಯವಾಗಿ ಹವಾಮಾನ ಆಧರಿತ ಬೆಳೆವಿಮೆ ಯೋಜನೆ, ಇದರಲ್ಲಿ 2023-24ನೇ ಸಾಲಿನಲ್ಲಿ 1173 ಸದಸ್ಯರು 43 ಲಕ್ಷದ 46 ಸಾವಿರ ರೂ. ಪ್ರೀಮಿಯಂ ಪಾವತಿಸಿದ್ದಾರೆ. ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದೇವೆ. ಲಾಭ-ನಷ್ಟ ಸಮಾನವಾಗಿ ಹಂಚಿಕೆ ಮಾಡಿದ್ದೇವೆ. ಸಂಘಕ್ಕೂ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ಸದಸ್ಯರಿಗೆ ಶೇ.14ರಷ್ಟು ಡಿವಿಡೆಂಟ್ ವಿತರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ನಾವು ಇತರೆ ಸಂಘ ಸಂಸ್ಥೆ ಜೊತೆಗೂಡಿ ಉಚಿತ ನೇತ್ರಾ ಚಿಕಿತ್ಸಾ ಶಿಬಿರ, ಉಚಿತ ಕನ್ನಡಕ ವಿತರಣೆ, ಉಚಿತ ಆರೋಗ್ಯ ಶಿಬಿರ, ಕಾಳುಮೆಣಸು, ಕೊಕ್ಕೋ ಬೆಳೆಗಳ ಮಾಹಿತಿ ಕಾರ್ಯಾಗಾರ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಲವಾರು ಕಾಲೇಜುಗಳ ವಿದ್ಯಾರ್ಥಿನಿಯರು ಸಂಸ್ಥೆಯಲ್ಲಿ ಇಂಟರ್ನ್ ಶಿಪ್ ಪ್ರಾಜೆಕ್ಟ್ ಪೂರೈಸಿದ್ದಾರೆ. ಅಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸದಸ್ಯರಿಗೆ ಸದಸ್ಯರ ಕಲ್ಯಾಣ ನಿಧಿಯಿಂದ ತಲಾ 5000 ರೂ. ನೀಡಲಾಗಿದೆ.