ನ್ಯೂಸ್ ನಾಟೌಟ್: ದೆಹಲಿಯ ದೇವಸ್ಥಾನಗಳಲ್ಲಿನ ಅರ್ಚಕರಿಗೆ ತಿಂಗಳಿಗೆ 18,000 ರೂ. ಸಹಾಯಧನ ನೀಡುವುದಾಗಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಗೆಲ್ಲಲು ಈಗಾಗಲೇ ಹಲವು ಭರಪೂರ ಘೋಷಣೆ ಮಾಡಿರುವ ಕೇಜ್ರಿವಾಲ್ ಈಗ ಹಿಂದೂ ದೇವಸ್ಥಾನ ಮತ್ತು ಗುರುದ್ವಾರಗಳಲ್ಲಿ ಪೂಜೆ ಮಾಡುವವರಿಗೆ ಪೂಜಾರಿ ಗ್ರಂಥಿ ಸಮ್ಮಾನ್ ಯೋಜನೆ ಹೆಸರಿನಲ್ಲಿ ಸಹಾಯಧನದ ಭರವಸೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪುರೋಹಿತರು ಮತ್ತು ಗ್ರಂಥಿಗಳು ನಮ್ಮ ಧಾರ್ಮಿಕ ಪದ್ಧತಿಗಳ ಪಾಲಕರಾಗಿದ್ದಾರೆ, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ದುರದೃಷ್ಟವಶಾತ್ ಅವರ ಆರ್ಥಿಕ ಯೋಗಕ್ಷೇಮದ ಬಗ್ಗೆ ಯಾರೂ ಕಾಳಜಿ ವಹಿಸಿಲ್ಲ, ಇದಕ್ಕಾಗಿ ನಾವು ಈ ಯೋಜನೆಯನ್ನು ಪರಿಚಯಿಸುತ್ತಿದ್ದೇವೆ ಎಂದರು.
ಈಗಾಗಲೇ ಮಹಿಳೆಯರಿಗೆ ಪ್ರತಿ ತಿಂಗಳು 2,100 ರೂ., ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಆಟೋ ಚಾಲಕರಿಗೆ ಐದು ವಿಶೇಷ ಯೋಜನೆ ಘೋಷಣೆ, ವೃದ್ಧರಿಗಾಗಿ ಉಚಿತ ಆರೋಗ್ಯ ಚಿಕಿತ್ಸೆ ನೀಡುವ ಭರವಸೆಯನ್ನು ನೀಡಿದ್ದಾರೆ.
ಮರಳಿ ಅಧಿಕಾರಕ್ಕೆ ಬಂದಲ್ಲಿ ಘೋಷಣೆ ಮಾಡಲಾಗಿರುವ ಎಲ್ಲಾ ಯೋಜನೆಗಳು ಆರಂಭಿಸುವುದಾಗಿ ಕೇಜ್ರಿವಾಲ್ ಪ್ರಕಟಿಸಿದ್ದಾರೆ.
Click