ನ್ಯೂಸ್ ನಾಟೌಟ್: ತಮಿಳುನಾಡಿನಲ್ಲಿ ಭಾರೀ ಅಬ್ಬರವನ್ನು ಸೃಷ್ಟಿಸಿರುವ ‘ಫೆಂಗಲ್’ ರಣಚಂಡಿ ಬಿಸಿ ಕರ್ನಾಟಕದ ಜನರಿಗೂ ತಟ್ಟಿದೆ. ನಿರಂತರ ಗಾಳಿ-ಮಳೆಗೆ ಜನ ತತ್ತರಿಸಿದ್ದಾರೆ. ಕೊಡಗು ಹಾಗೂ ದಕ್ಷಿಣ ಕನ್ನಡ ಭಾಗಕ್ಕೆ ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ಬೆನ್ನಲ್ಲೇ ಭಾರಿ ಮಳೆಗೆ ಕೊಡಗು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾಗಿರುವ ಪೆರಾಜೆಯ ರಿಕ್ಷಾ ನಿಲ್ದಾಣ ಕುಸಿದು ಬಿದ್ದಿದೆ.
ಕಳೆದ ಕೆಲವು ವರ್ಷಗಳಿಂದ ಪೆರಾಜೆಗೆ ಶಾಶ್ವತವಾದ ಆಟೋ ರಿಕ್ಷಾ ನಿಲ್ದಾಣವನ್ನು ಮಾಡಬೇಕೆಂಬ ಒತ್ತಾಯವಿತ್ತು. ಗ್ರಾಮ ಸಭೆಯಲ್ಲಿ ಭಾರಿ ಒತ್ತಡ ಹಾಕಿದ ಬಳಿಕ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಳೆದ 6 ತಿಂಗಳ ಹಿಂದೆ ತಾತ್ಕಾಲಿಕವಾದ ರಿಕ್ಷಾ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಅಡಿಕೆ ಮರದ ರೀಪ್ ಗಳಿಂದ ರಿಕ್ಷಾ ನಿಲ್ದಾಣ ತಲೆ ಎತ್ತಿತ್ತು. ಇದೀಗ ನಿರಂತರ ಮಳೆಯ ಹಿನ್ನೆಲೆಯಲ್ಲಿ ಅದು ಕುಸಿದು ಬಿದ್ದಿದೆ. ರಿಕ್ಷಾ ಚಾಲಕರ ಆಸರೆಗಾಗಿ ಇದ್ದ ಏಕೈಕ ಸ್ಟ್ಯಾಂಡ್ ಕುಸಿದ ಹಿನ್ನೆಲೆಯಲ್ಲಿ ಇದೀಗ ಎಲ್ಲ ರಿಕ್ಷಾ ಚಾಲಕರು ಕೂಡ ಮಳೆಯಲ್ಲೇ ನಿಂತು ಬಾಡಿಗೆ ಮಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.