ಮುನಿರತ್ನ ಮೊಟ್ಟೆ ಎಸೆತ ಕೇಸ್‌ ನಲ್ಲಿ 100ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌.ಐ.ಆರ್..! ವಕೀಲರ ವೇಷದಲ್ಲಿ ಬಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬೆದರಿಸಿದ್ದಾರೆ ಎಂದ ಶಾಸಕ..!

ನ್ಯೂಸ್ ನಾಟೌಟ್ : ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣವು ಇದೀಗ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಈ ಪ್ರಕರಣ ಸಂಬಂಧ ಸುಮಾರು 100ಕ್ಕೂ ಹೆಚ್ಚು ಮಂದಿಯ ವಿರುದ್ಧ ನಂದಿನಿ ಲೇಔಟ್‌ ಪೊಲೀಸರು ಎಫ್‌.ಐ.ಆರ್‌ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮುನಿರತ್ನ ನೀಡಿರುವ ದೂರಿನ ಮೇರೆಗೆ ಎಫ್‌.ಐ.ಆರ್‌ ದಾಖಲಾಗಿದೆ. ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವರ ವಿರುದ್ಧ ಎಫ್‌.ಐ.ಆರ್‌ ದಾಖಲಾಗಿದೆ. ಸುಮಾರು 100ರಿಂದ 150 ಜನರನ್ನು ಬಳಸಿಕೊಂಡು ನನ್ನ ಕೊಲೆ ಮಾಡಲು ಕಾಂಗ್ರೆಸ್ ನಾಯಕರು ಸಂಚು ರೂಪಿಸಿದ್ದಾರೆ ಎಂದು ಮುನಿರತ್ನ ತಮ್ಮ ದೂರಿನಲ್ಲಿ ಆರೋಪ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದರು. ನಿನ್ನೆ ಮೂವರಿಗೂ ಜಾಮೀನು ಸಿಕ್ಕಿ, ಹೊರ ಬಂದಿದ್ದಾರೆ. “ನನ್ನ ಜೀವಕ್ಕೆ ಅಪಾಯವಿದೆ ಎಂದು ಈಗಾಗಲೇ ರಾಜ್ಯಪಾಲರಿಗೂ ದೂರು ನೀಡಿದ್ದೇನೆ. ಆದರೂ ನನಗೆ ಗನ್‌ ಮ್ಯಾನ್‌ ಕೊಟ್ಟಿಲ್ಲ. ಕೆಲವರು ವಕೀಲರ ವೇಷದಲ್ಲಿ ಬಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೇಳಿದ್ದರು. ರಾಜೀನಾಮೆ ಕೊಡದಿದ್ದರೆ, ಪೋಕ್ಸೋ ಕೇಸ್‌ ಹಾಕಿಸಿ ಜೈಲಿಗೆ ಕಳುಹಿಸುವುದಾಗಿ ವಾರ್ನಿಂಗ್‌ ಕೊಟ್ಟಿದ್ದರು. ಅಲ್ಲದೆ ಕುಸುಮಾ ಅವರು ಎಂಎಲ್‌ ಎ ಆಗಬೇಕು, ಬಳಿಕ ಅವರು ಸಚಿವರಾಗಿ ಅಧಿಕಾರಕ್ಕೆ ಬರಬೇಕು. ಇದು ನಮ್ಮಣ್ಣ ಡಿ.ಕೆ.ಸುರೇಶ್‌ ಅವರ ಆಸೆ ಎಂದು ಬೆದರಿಕೆ ಹಾಕಿದ್ದಾಗಿಯೂ” ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಮುನಿರತ್ನ ಅವರ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರ ಗುಂಪೊಂದು ಮೊಟ್ಟೆ ಎಸೆದು ಹಲ್ಲೆಗೆ ಯತ್ನಿಸಿತ್ತು ಎಂದು ಆರೋಪಿಸಲಾಗಿದೆ. ಈ ಘಟನೆ ಬಳಿಕ ಅಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯೂ ನಡೆದು, ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದರು. ಈ ಘಟನೆ ನಂತರ ತಮ್ಮ ಮೇಲಿನ ದಾಳಿ ಖಂಡಿಸಿ, ಮುನಿರತ್ನ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದರು. Click