ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಆಂಧ್ರದ ಅರಣ್ಯ ಸಿಬ್ಬಂದಿಗೆ ತರಬೇತಿ, ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಮನವಿ ಮೇರೆಗೆ ಕಾರ್ಯಾಗಾರ

ನ್ಯೂಸ್ ನಾಟೌಟ್: ಆಂಧ್ರ ಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿಗೆ 1 ತಿಂಗಳು ತರಬೇತಿ ನೀಡುವ ಕಾರ್ಯಾಗಾರಕ್ಕೆ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಇಂದು(ಡಿ.1) ಚಾಲನೆ ಸಿಕ್ಕಿದೆ. ಆಂಧ್ರದ ಉಪಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಾಗಿರುವ ಪವನ್‌ ಕಲ್ಯಾಣ್‌ ಮನವಿ ಮೇರೆಗೆ ಆಂಧ್ರದ 20ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಕಾಡಾನೆ ಸೇರಿದಂತೆ ವನ್ಯಜೀವಿಗಳ ಸಮಸ್ಯೆ ಕರ್ನಾಟಕ ಮಲೆನಾಡು ಭಾಗದಲ್ಲಿ ಮಾತ್ರವಲ್ಲ, ನೆರೆಯ ಆಂಧ್ರಪ್ರದೇಶದಲ್ಲೂ ಹೆಚ್ಚಾಗಿದೆ. ನಾಡಿಗೆ ನುಗ್ಗುವ ಆನೆಗಳನ್ನ ಮತ್ತೆ ಕಾಡಿಗಟ್ಟಲು ಆಂಧ್ರದಲ್ಲಿ ನುರಿತ ಮಾವುತರು ಹಾಗೂ ಕಾವಾಡಿಗಳು ಇಲ್ಲದೇ ಇರೋದು ಸಮಸ್ಯೆಗೆ ಕಾರಣವಾಗಿದೆ. ಆದ್ದರಿಂದ ವನ್ಯಜೀವಿ ನಿರ್ವಹಣೆ ಕುರಿತು ರಾಜ್ಯದ ಅರಣ್ಯ ಸಿಬ್ಬಂದಿಗೆ ತರಬೇತಿ ನೀಡಬೇಕೆಂದು ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಪವನ್‌ ಕಲ್ಯಾಣ್ ಮನವಿ ಮಾಡಿದ್ದರು. ಅದರಂತೆ‌ ಎರಡು ರಾಜ್ಯಗಳ ಅರಣ್ಯ ಇಲಾಖೆಗಳ ಪರಸ್ಪರ ಸಹಕಾರದೊಂದಿಗೆ ತರಬೇತಿ ನೀಡಲಾಗುತ್ತಿದೆ. ಆಂಧ್ರ ಪ್ರದೇಶದ 17 ಮಾವುತ ಮತ್ತು ಕಾವಾಡಿಗರು, ನಾಲ್ವರು ಇಲಾಖೆ ಸಿಬ್ಬಂದಿ ಸೇರಿ 21 ಮಂದಿಗೆ ನಮ್ಮ ರಾಜ್ಯದ ಮಾವುತರು ಮತ್ತು ಕವಾಡಿಗಳು ತರಬೇತಿ ನೀಡುತ್ತಿದ್ದಾರೆ. ಸಾಕಾನೆಗಳಿಗೆ ಸ್ನಾನ ಮಾಡಿಸುವುದು, ಆಹಾರ ಕೊಡುವುದು, ಇಂತಹದ್ದೇ ಪದಗಳನ್ನು ಬಳಸಿ ಆನೆಗಳನ್ನು ಮಾತನಾಡಿಸುವುದು, ವನ್ಯಜೀವಿ‌ ಸಂಘರ್ಷ ತಡೆಯುವುದು ಸೇರಿದಂತೆ ಇನ್ನಿತರ ವನ್ಯಜೀವಿ ನಿರ್ವಹಣೆ ಕುರಿತು ಹೇಳಿಕೊಡುತ್ತಿದ್ದಾರೆ ಎನ್ನಲಾಗಿದೆ. Click