ಪತ್ನಿಯ ಚಿತೆಗೆ ವೃದ್ಧ ಪತಿಯನ್ನು ತಳ್ಳಿ ಸಜೀವ ದಹನ..! ಓರ್ವ ಆರೋಪಿ ಅರೆಸ್ಟ್..!

ನ್ಯೂಸ್ ನಾಟೌಟ್ : ಹೊತ್ತಿ ಉರಿಯುತ್ತಿದ್ದ ಪತ್ನಿಯ ಚಿತೆಗೆ ಆಕೆಯ ವೃದ್ಧ ಪತಿಯನ್ನು ತಳ್ಳಿ ಸಜೀವವಾಗಿ ದಹಿಸಿದ ಅಮಾನುಷ ಘಟನೆ ಜಾರ್ಖಂಡ್ ನ ಗುಮ್ಲಾದಿಂದ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಬುದ್ಧೇಶ್ವರ ಓರನ್ (60) ಎಂದು ಗುರುತಿಸಲಾಗಿದೆ. ಸಂತ್ರಸ್ತ ವ್ಯಕ್ತಿಯ ಬಾವ ಝಾರಿ ಓರನ್ ಹಾಗೂ ಆತನ ಮಗ ಕರ್ಮಪಾಲ್ ಓರನ್ ಹಳೆ ವ್ಯಾಜ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಬುಧವಾರ ನಡೆದಿದ್ದರೂ, ಗುರುವಾರ ಝಾರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳು ಶರಣಾದ ಬಳಿಕ ಬೆಳಕಿಗೆ ಬಂದಿದೆ. ಚಿತಾಗ್ನಿಗೆ ಎಸೆಯುವ ಮುನ್ನ ಕೊಡಲಿಯಿಂದ ತಂದೆಗೆ ಹೊಡೆಯಲಾಗಿತ್ತು ಎಂದು ಮೃತ ವ್ಯಕ್ತಿಯ ಮಗ ಸಂದೀಪ್ ಓರನ್ ಆರೋಪಿಸಿದ್ದಾರೆ.“ತಾಯಿ ಮಂಗ್ರಿದೇವಿ ಗ್ರಾಮದ ಬಾವಿಗೆ ಬಿದ್ದು ಮೃತಪಟ್ಟಿದ್ದರು. ತಂದೆ ಸೇರಿದಂತೆ ಕುಟುಂಬದವರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದೆವು. ಹಳೆಯ ವ್ಯಾಜ್ಯದ ಕಾರಣದಿಂದ ನನ್ನ ಸೋದರಮಾವ ಝಾರಿ ಓರನ್ ಮತ್ತು ಆತನ ಮಗ ಕರ್ಮಪಾಲ್ ಓರನ್ ನನ್ನ ತಂದೆಯನ್ನು ಹೊಡೆದು ತಾಯಿಯ ಚಿತೆಗೆ ತಳ್ಳಿ ಜೀವಂತವಾಗಿ ದಹಿಸಿದರು” ಎಂದು ಸಂದೀಪ್ ದೂರು ನೀಡಿದ್ದಾರೆ. ತಂದೆಗೆ ಕೊಡಲಿಯಿಂದ ಹೊಡೆದಾಗ ಅಲ್ಲಿದ್ದ ಎಲ್ಲರೂ ಓಡಿಹೋದರು. ಬಳಿಕ ಝಾರಿ ಹಾಗೂ ಕರ್ಮಪಾಲ್ ತಂದೆಯನ್ನು ಚಿತೆಗೆ ಎಸೆದರು ಎಂದು ಆಪಾದಿಸಿದ್ದಾರೆ. ಘಟನೆಯನ್ನು ದೃಢಪಡಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. Click