ನ್ಯೂಸ್ ನಾಟೌಟ್: ನಮ್ಮ ದೇಶದಲ್ಲಿ ಸಂವಿಧಾನವನ್ನು ಜಾರಿಗೊಳಿಸಿ 75 ವರ್ಷಗಳಾಗುತ್ತಾ ಬಂದಿದೆ. ಆದರೂ, ಅಸ್ಪೃಶ್ಯತೆ, ಕೀಳಿರಿಮೆ ಇನ್ನೂ ಇದೆ. ದಲಿತರು ದೇವಸ್ಥಾನದ ಕಾಂಪೌಂಡ್ ಒಳಗೆ ಪ್ರವೇಶ ಮಾಡಿದ್ದಕ್ಕೆ ಗ್ರಾಮದ ಸವರ್ಣೀಯರು ದಲಿತ ಕುಟುಂಬಕ್ಕೆ ಬರೋಬ್ಬರಿ 2.5 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ.
ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದಲಿತರು ದೇವಸ್ಥಾನದ ಕಾಂಪೌಂಡ್ ಒಳ ಹೋಗಿದ್ದಕ್ಕೆ ದಂಡ ವಿಧಿಸಿದ್ದಾರೆ. ಈ ದಲಿತ ಬಡ ಕುಟುಂಬಕ್ಕೆ ಗ್ರಾಮದ ಸವರ್ಣೀಯರು ಬರೋಬ್ಬರಿ 2.5 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟದಿದ್ದರೆ ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಈವರೆಗೆ ಈ ಗ್ರಾಮಕ್ಕೆ ಸರ್ಕಾರದ ಯಾವುದೇ ಪ್ರತಿನಿಧಿ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಆರೋಪಿಸಲಾಗಿದೆ.
ಇನ್ನು ದಲಿತರು ದೇವಾಲಯದ ಕಾಂಪೌಂಡ್ ಒಳಗೆ ಪ್ರವೇಶ ಮಾಡಿದ್ದಾರೆಂದು ದೇವಸ್ಥಾನದಲ್ಲಿ ಪೂಜೆ ನಿಲ್ಲಿಸಿ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ಇನ್ನು ದೇವಸ್ಥಾನದಲ್ಲಿ ಪೂಜೆ ನಡೆಯಬೇಕೆಂದರೆ ಗರ್ಭಗುಡಿ-ಕಾಂಪೌಂಡ್ ಶುದ್ಧಿಕರಿಸಬೇಕು. ಇದಕ್ಕಾಗಿ ಲಕ್ಷಾಂತರ ರೂ. ಹಣ ಬೇಕಾಗುತ್ತದೆ. ಆದ್ದರಿಂದ ದೇವಾಲಯದ ಕಾಂಪೌಂಡ್ ಒಳಗೆ ಪ್ರವೇಶ ಮಾಡಿದ ದಲಿತರಿಂದ 2.5 ಲಕ್ಷ ರೂ. ದಂಡ ಪಾವತಿಸಿದಲ್ಲಿ ಅವರ ಹಣದಿಂದ ಶುದ್ಧೀಕರಣ ಮಾಡಿ ದೇವಸ್ಥಾನದಲ್ಲಿ ಪೂಜೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ ಎನ್ನಲಾಗಿದೆ.
ಒಟ್ಟು 160 ಕುಟುಂಬಗಳಿರೋ ಬಿ.ಕೋಡಿ ಹಳ್ಳಿ ಗ್ರಾಮದಲ್ಲಿನ ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ ಎಂದು ಮಂಜಪ್ಪ ಎಂಬುವವರು ಕಡೂರು ತಾಲೂಕಿನ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಈ ಮಾಹಿತಿ ಉಲ್ಲೇಖಿಸಲಾಗಿದೆ.
Click