- +91 73497 60202
- [email protected]
- January 6, 2025 3:54 PM
ಕರ್ನಾಟಕದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆಗಳು, 2010 ರ ನಂತರ ನೇಮಕಾತಿಯೇ ನಡೆದಿಲ್ಲ
ನ್ಯೂಸ್ ನಾಟೌಟ್: ಕರ್ನಾಟಕ ರಾಜ್ಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅರ್ಧದಷ್ಟು ಉಪನ್ಯಾಸಕರ ಹುದ್ದೆಗಳು ಖಾಲಿಯಿದೆ. ಜತೆಗೆ ಬೋಧಕೇತರ ಸಿಬ್ಬಂದಿ ಹುದ್ದೆಗಳೂ ಖಾಲಿ ಇವೆ ಎಂದು ವರದಿಯಾಗಿದೆ. 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು ಮಂಜೂರಾದ ಉಪನ್ಯಾಸಕರ ಹುದ್ದೆಗಳು 646 ಆಗಿದ್ದು, ಅದರಲ್ಲಿ 307 ಖಾಲಿ ಇವೆ ಎಂಬುದಾಗಿ ತಾಂತ್ರಿಕ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಈ ಹುದ್ದೆಗಳಿಗೆ 2010ರಲ್ಲಿ ಕೊನೆಯ ಬಾರಿ ನೇಮಕಾತಿ ನಡೆದಿತ್ತು.ಉಪನ್ಯಾಸಕರ ಕೊರತೆ ಇರುವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಲು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಆದರೆ, ಇದರಿಂದ ಕಾಲೇಜುಗಳಿಗೆ ಎರಡು ರೀತಿಯಲ್ಲಿ ಸಮಸ್ಯೆಯಾಗುತ್ತಿದೆ. ಅಗತ್ಯ ಉಪನ್ಯಾಸಕರು ಇಲ್ಲದಿರುವುದು ಕಾಲೇಜುಗಳು ಕೇಂದ್ರದ ಏಜೆನ್ಸಿಗಳಿಂದ ಅನುದಾನ ಪಡೆಯುವುದಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಇನ್ನೊಂದು ಸಮಸ್ಯೆ ಎಂದರೆ, ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ (NBA) ಪ್ರಮಾಣಪತ್ರವನ್ನು ಪಡೆಯುವುದು ಕಷ್ಟಕರವಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 2010 ರ ನಂತರ ಯಾವುದೇ ನೇಮಕಾತಿ ನಡೆದಿಲ್ಲ. ನಿವೃತ್ತಿ, ಮರಣ ಮತ್ತು ಸ್ವಯಂ ನಿವೃತ್ತಿಯಿಂದಾಗಿ ಖಾಲಿಯಾದ ಹುದ್ದೆಗಳಿಗೂ ಸಹ ನೇಮಕಾತಿ ನಡೆದಿಲ್ಲ. ಆ ಹುದ್ದೆಗಳನ್ನು ಭರ್ತಿ ಮಾಡಲು ಸಹ ನಾವು ಆರ್ಥಿಕ ಇಲಾಖೆಯ ಅನುಮೋದನೆಯನ್ನು ಪಡೆಯಬೇಕಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ. ಉಪನ್ಯಾಸಕರ ಹುದ್ದೆ ಮಾತ್ರವಲ್ಲದೆ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬೋಧಕೇತರ ಹುದ್ದೆಗಳೂ ಕಳೆದ 14 ವರ್ಷಗಳಿಂದ ಖಾಲಿ ಇವೆ. ಅಂಕಿಅಂಶಗಳ ಪ್ರಕಾರ, 1150 ಬೋಧಕೇತರ ಹುದ್ದೆಗಳಲ್ಲಿ 1,023 ಖಾಲಿ ಇವೆ ಎಂದು ವರದಿ ತಿಳಿಸಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ