ಉಚಿತ ಶಿಕ್ಷಣ, ಅನ್ನದಾಸೋಹ, ಉಚಿತ ಕುಡಿಯುವ ನೀರು ಪೂರೈಸುತ್ತಿರುವ ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ. ವಿದ್ಯುತ್‌ ಬಿಲ್‌..! ವಿವಾದದ ಬಳಿಕ ನೋಟಿಸ್ ಹಿಂಪಡೆದ ಸರ್ಕಾರ..!

ನ್ಯೂಸ್ ನಾಟೌಟ್: ತುಮಕೂರಿನ ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ. ವಿದ್ಯುತ್‌ ಬಿಲ್‌ ಪಾವತಿಸುವಂತೆ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ) ನೋಟಿಸ್ ನೀಡಿದ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ವಿದ್ಯುತ್ ಬಿಲ್ ಪಾವತಿ ವಿಚಾರವಾಗಿ ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಪತ್ರ ಬರೆದಿದ್ದಾರೆ. ದೇವರಾಯನಪಟ್ಟಣ ಕೆರೆಯಿಂದ ಸಿದ್ದಗಂಗಾ ಮಠಕ್ಕೆ ಕುಡಿಯುವ ನೀರಿನ ಉಪಯೋಗಕ್ಕೆ ಬಳಕೆ ಮಾಡಲು ಸ್ಥಾಪಿಸಲ್ಪಟ್ಟಿರುವ ಶುದ್ದೀಕರಣ ಘಟಕ ಇನ್ನೂ ಪ್ರಾರಂಭವಾಗಿಲ್ಲ. ಪ್ರಾಯೋಗಿಕವಾಗಿ ಕೆರೆ ನೀರನ್ನು ಭರ್ತಿ ಮಾಡಿರುತ್ತಾರೆ. ಶುದ್ಧೀಕರಣ ಘಟಕ ಪ್ರಾರಂಭವಾಗಬೇಕಾಗಿದ್ದು, ಸದರಿ ಶುದ್ದೀಕರಣ ಘಟಕದಿಂದ ಸಿದ್ದಗಂಗಾ ಮಠದ 10000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪ್ರತಿನಿತ್ಯ ಮಠಕ್ಕೆ ಬರುವ ಭಕ್ತರಿಗೆ ಹಾಗೂ ಅಕ್ಕಪಕ್ಕದ ಗ್ರಾಮಗಳಾದ ದೇವರಾಯಪಟ್ಟಣ, ಮಾರನಾಯ್ಕನಪಾಳ್ಯ, ಬಸವಪಟ್ಟಣ, ಬಂಡೇಪಾಳ್ಯ ಸೇರಿದಂತೆ ಹಲವು ಹಳ್ಳಿಗಳಿಗೆ ನೀರು ಸರಬರಾಜು ವ್ಯವಸ್ಥೆ ಮಾಡಬೇಕಾಗಿರುತ್ತದೆ. ಇದರಿಂದ ಸಿದ್ದಗಂಗಾ ಮಠದಿಂದ ವಿದ್ಯುತ್ ಬಿಲ್ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಹಳ್ಳಿಗಳಿಗೆ, ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಸರ್ಕಾರದ ಆದ್ಯ ಕರ್ತವ್ಯ ಆದರೆ, ಇದನ್ನು ಮಥ ಮಾಡುತ್ತಿದೆ. ಅದಕ್ಕಾಗಿ ಬರುವ ವಿದ್ಯುತ್ ಬಿಲ್ ಸರ್ಕಾರದಿಂದ ಪಾವತಿ ಮಾಡಬೇಕೇ ಹೊರತು ಸಂಘ ಸಂಸ್ಥೆಗಳು ಪಾವತಿ ಮಾಡಲು ಬರುವುದಿಲ್ಲ. ಕೆಐಎಡಿಬಿ ಅಧಿಕಾರಿಗಳು ಹಾಗೂ ಮೇಲಾಧಿಕಾರಿಗಳು ದೇವರಾಯಪಟ್ಟಣ ಕೆರೆಯ ನೀರನ್ನು ಸಿದ್ದಗಂಗಾ ಮಠದ ದೈನಂದಿನ ಕೆಲಸ ಕಾರ್ಯಗಳಿಗೆ ಬಳಕೆ ಮಾಡುತ್ತಿರುವುದಾಗಿ ನೀಡಿರುವ ವರದಿಯನ್ನು ಪುನರ್ ಪರಿಶೀಲಿಸಿ ಕುಡಿಯುವ ನೀರಿನ ಸೌಕರ್ಯವನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಇದನ್ನ ಪುನರ್ ಪರಿಶೀಲನೆ ಮಾಡಬೇಕೆಂದು ಕೋರುತ್ತೇವೆಂದು ಪತ್ರದಲ್ಲಿ ಸ್ವಾಮೀಜಿ ಉಲ್ಲೇಖಿಸಿದ್ದಾರೆ. ನವೆಂಬರ್ 26 ರಂದೇ ಸ್ವಾಮೀಜಿ ಪತ್ರ ಬರೆದಿದ್ದರು ಎಂಬುದು ತಿಳಿದುಬಂದಿದೆ. ಹಲವು ಮಠಗಳು ಅನ್ನದಾಸೋಹ, ಉಚಿತ ಶಿಕ್ಷಣ ನೀಡುತ್ತಿವೆ ಅದರಲ್ಲಿ ಸಿದ್ದಗಂಗಾ ಮಠ ಪ್ರಮುಖವಾದದ್ದು. ಹೀಗಾಗಿ ಮಠಗಳಿಗೆ ಕೊಡುವ ಪರಂಪರೆ ನಮ್ಮಲ್ಲಿದೆ. ಮಠದಿಂದಲೇ ಕಿತ್ತುಕೊಳ್ಳುವ ಸರ್ಕಾರ ಯಾವ ಪರಿಸ್ಥಿತಿಗೆ ಬಂದಿದೆ? ಎಂದು ಸಿಟಿ ರವಿ ಹೇಳಿಕೆ ನೀಡಿದ್ದಾರೆ. ಸಿದ್ದಗಂಗಾ ಮಠಕ್ಕೆ ನೀಡಿದ್ದ ನೋಟಿಸ್​ ವಾಪಸ್ ಪಡೆಯುತ್ತೇವೆ. ಅಧಿಕಾರಿಗಳ ತಪ್ಪು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.