ನ್ಯೂಸ್ ನಾಟೌಟ್ : ಸಂಪೂರ್ಣ ಗೋಳಾಕಾರದ ಮೊಟ್ಟೆಗೆ ಹರಾಜಿನಲ್ಲಿ (Auction) ಬಿಡ್ ಮಾಡಲಾದ ಗರಿಷ್ಠ ಬೆಲೆ 21,000 ರೂ. ಈ ಮೊಟ್ಟೆ ಸಾಮಾನ್ಯಕ್ಕಿಂತ ವಿಭಿನ್ನವಾಗಿದೆ. ಇತ್ತೀಚೆಗೆ ಇಂಗ್ಲೆಂಡ್ನ ಲ್ಯಾಂಬೌರ್ನ್ ಆಫ್ ಬರ್ಕ್ ಷೈರ್ ನಲ್ಲಿ ನಡೆದ ಹರಾಜಿನಲ್ಲಿ ಈ ಗೋಳಾಕಾರದ ಮೊಟ್ಟೆ ಗಣನೀಯ ಬೆಲೆಗೆ ಮಾರಾಟವಾಗಿದೆ.
10 ಕೋಟಿ ಮೊಟ್ಟೆಗಳಲ್ಲಿ ಒಂದು ಮೊಟ್ಟೆ ಮಾತ್ರ ಈ ರೀತಿ ಸಂಪೂರ್ಣ ಗೋಳಾಕಾರದಲ್ಲಿರುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಈ ಅಪರೂಪದ ಎಗ್ಗೆ ಅಷ್ಟು ದುಬಾರಿ ಬೆಲೆ ಬಿಡ್ ಮಾಡಲು ಜನರು ಸಿದ್ಧರಿದ್ದಾರೆ. ಈ ಅಪರೂಪದ ಮೊಟ್ಟೆಯನ್ನು ಲ್ಯಾಂಬೋರ್ನ್ ನಿವಾಸಿ ಎಡ್ ಪೊವೆಲ್ ಖರೀದಿಸಿದ್ದರು. ಆರಂಭದಲ್ಲಿ ಕುತೂಹಲದಿಂದ ಸುಮಾರು 16,000 ರೂ.ಗೆ ಮೊಟ್ಟೆ ಖರೀದಿಸಿದ್ದ ಅವರು, ನಂತರದಲ್ಲಿ ಅದನ್ನು ದತ್ತಿ ಸಂಸ್ಥೆಯಾದ ಲುವೆಂಟಸ್ ಫೌಂಡೇಶನ್ಗೆ ಕೊಡುಗೆಯಾಗಿ ನೀಡಿದ್ದರು.
ಈ ಮೊಟ್ಟೆಯ ವಿಶೇಷತೆಯನ್ನು ಗುರುತಿಸಿದ ಲುವೆಂಟಸ್ ಫೌಂಡೇಶನ್, ಇದನ್ನು ಹರಾಜಿನಲ್ಲಿ ಬಿಡ್ಡಿಂಗ್ಗೆ ಅವಕಾಶ ಮಾಡಿಕೊಟ್ಟಿತು. ಅಪರೂಪದಲ್ಲಿ ಅಪರೂಪ ಎನ್ನುವ ಈ ಗೋಳಾಕಾರದ ಮೊಟ್ಟೆ ಹರಾಜಾಗುತ್ತಿರುವ ಸುದ್ದಿ ಹರಡುತ್ತಿದ್ದಂತೆ, ಸ್ಥಳೀಯ ಜನರು ಮೊಟ್ಟೆಯನ್ನು ಖರೀದಿಸಲು ಆಸಕ್ತಿ ತೋರಿದರು. ಲುವೆಂಟಸ್ ಫೌಂಡೇಶನ್ ತಮ್ಮ ದತ್ತಿ ಚಟುವಟಿಕೆಗಳಿಗೆ ಹಣವನ್ನು ಸಂಗ್ರಹಿಸಲು ಹಲವಾರು ವಸ್ತುಗಳ ಪೈಕಿ ಈ ಮೊಟ್ಟೆಯನ್ನು ಸಹ ಹರಾಜಿನಲ್ಲಿ ಇರಿಸಿತ್ತು. ಕಡೆಗೂ ಮೊಟ್ಟೆಯನ್ನು ಖರೀದಿಸಲೇ ಬೇಕೆಂದು ಬಿಡ್ಡಿಂಗ್ ಪೈಪೋಟಿಗೆ ಇಳಿದ ಓರ್ವ ವ್ಯಕ್ತಿ, ಬರೋಬ್ಬರಿ 21 ಸಾವಿರ ರೂ.ಗೆ ಅದನ್ನು ಖರೀದಿಸಿದ್ದಾರೆ.
ಇಂತಹ ಗೋಳಾಕಾರದ ಮೊಟ್ಟೆ ಹರಾಜಿನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ನಾಲ್ಕು ತಿಂಗಳ ಹಿಂದೆ ಮಹಿಳೆಯೊಬ್ಬರು ಅಂಗಡಿಯೊಂದರಲ್ಲಿ ಇದೇ ರೀತಿಯ ಮೊಟ್ಟೆಯನ್ನು ಪತ್ತೆ ಹಚ್ಚಿದ್ದರು. ಈ ಮೊಟ್ಟೆ ಯಾವ ಪಕ್ಷಿ ಪ್ರಬೇಧದ ಪಕ್ಷಿಗೆ ಅಥವಾ ಪ್ರಾಣಿಗೆ ಸೇರಿದ್ದು ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ.
Click