ನ್ಯೂಸ್ ನಾಟೌಟ್: ನಕಲಿ ದಾಖಲಾತಿ ನೀಡಿ ಸಬ್ ಇನ್ ಸ್ಪೆಕ್ಟರ್ ಹುದ್ದೆ ಗಿಟ್ಟಿಸಿಕೊಂಡಿರುವ ಬ್ಯಾಡರಹಳ್ಳಿ ಪಿಎಸ್ ಐ ಕಾಶಿಲಿಂಗೇಗೌಡ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್.ಟಿ.ಚಂದ್ರಶೇಖರ್ ನೀಡಿರುವ ದೂರಿನ ಆಧಾರದ ಮೇಲೆ ಬ್ಯಾಡರಹಳ್ಳಿ ಪಿಎಸ್ ಐ ಕಾಶಿಲಿಂಗೇಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪೊಲೀಸ್ ಇಲಾಖೆಯಿಂದ 2017-18 ರಲ್ಲಿ ಪಿಎಸ್ಐ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಗರಿಷ್ಠ ವಯೋಮಿತಿಯು 2018 ಮಾ.12ಕ್ಕೆ 30 ವರ್ಷ ಮೀರಿರಬಾರದು ಎಂಬುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಕಾಶಿಲಿಂಗೇಗೌಡ ಅವರ ಜನ್ಮದಿನ 1987ರ ಏಪ್ರಿಲ್ 15 ಆಗಿತ್ತು. ವಯೋಮಿತಿಯ ಅನ್ವಯ ಇವರು ಪಿಎಸ್ಐ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲದಿದ್ದರೂ ಸಹ ಸಣಬ ಗ್ರಾಮದ ಅಂಗನವಾಡಿ ಕೇಂದ್ರದ 1987-88 ಮತ್ತು 1988-89ನೇ ಸಾಲಿನ ಚುಚ್ಚುಮದ್ದಿನ ರಿಜಿಸ್ಟರ್ನಲ್ಲಿನ ನಮೂದುಗಳನ್ನು ಅದಲು ಬದಲು ಮಾಡಿದ್ದರು.
ಬಳಿಕ ಘನ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಜೆಎಂಎಫ್ಸಿ ಕುಣಿಗಲ್ ನ್ಯಾಯಾಲಯದಲ್ಲಿ ತಮ್ಮ ಜನ್ಮ ದಿನಾಂಕ 1988ರ ಏಪ್ರಿಲ್ 15 ಎಂಬುದಾಗಿ ಖಾಸಗಿ ದಾವೆ ಹೂಡಿದ್ದರು. ತನ್ನ ವಯೋಮಿತಿಗೆ ಸಂಬಂಧಿಸಿದಂತೆ ನಕಲಿ ದಾಖಲಾತಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ಮೂಲಕ 1988 ಏ.15 ಎಂದು ತಿದ್ದುಪಡಿ ಮಾಡುವಂತೆ ಆದೇಶವನ್ನು ಪಡೆದುಕೊಂಡು, ಸುಳ್ಳು, ಜನ್ಮ ದಿನಾಂಕದ ನಕಲಿ ದಾಖಲಾತಿಗಳ ಮೂಲಕ ಪಿ.ಎಸ್.ಐ. ಹುದ್ದೆಗೆ ನೇಮಕಾತಿ ಹೊಂದಿದ್ದರು ಎಂಬುದು ಬಯಲಾಗಿದೆ.
Click