ನ್ಯೂಸ್ ನಾಟೌಟ್ : ಹಬ್ಬದಂದು ಮಾಂಸಕ್ಕಾಗಿ ದಂಪತಿ ಸುಮಾರು 19 ಕಾಗೆಗಳನ್ನು ಕೊಂದಿರುವ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ಬೆಳಕಿಗೆ ಬಂದಿದೆ.
ತಿರುವಳ್ಳೂರು ಜಿಲ್ಲೆಯ ನಾಯಪ್ಪಕ್ಕಂ ಮೀಸಲು ಪ್ರದೇಶದ ಬಳಿಯ ತಿರುಪಕ್ಕಂ ಎಂಬ ಗ್ರಾಮದಲ್ಲಿ ವಾಸವಿದ್ದ ರಮೇಶ್ ಮತ್ತು ಭೂಚಮ್ಮ ದಂಪತಿ ಕಾಗೆಗಳನ್ನು ಸಾಯಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಸುಳಿವು ಸಿಕ್ಕಿತ್ತು. ಇದರ ಆಧಾರದ ಮೇಲೆ ಅವರ ಮನೆಯಲ್ಲಿ ಶೋಧ ನಡೆಸಿದಾಗ 19 ಸತ್ತ ಕಾಗೆಗಳು ಪತ್ತೆಯಾಗಿವೆ. ಇದನ್ನು ನೋಡಿದ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಈ ನಡುವೆ ರಮೇಶ್ ಮತ್ತು ಭೂಚಮ್ಮನನ್ನು ವಿಚಾರಣೆಗೊಳಪಡಿಸಿದಾಗ ಹಬ್ಬದಂದು ಮಾಂಸಕ್ಕಾಗಿ ಕಾಗೆಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಜೋಡಿ ಈಗಾಗಲೇ ಬೆಕ್ಕು, ಕಾಗೆ, ನಾಯಿ ಮುಂತಾದ ಪ್ರಾಣಿಗಳನ್ನು ಕೊಂದು ಮಾಂಸಕ್ಕಾಗಿ ಮಾರಾಟ ಮಾಡುತ್ತಿರುವ ದಂಧೆಯಲ್ಲಿರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಸ್ಥಳೀಯ ಅಂಗಡಿಗಳಲ್ಲಿ ಕೀಟನಾಶಕಗಳನ್ನು ಖರೀದಿಸಿ ಆಹಾರಕ್ಕೆ ಸೇರಿಸಿ ಈ ಕಾಗೆಗಳನ್ನು ಕೊಂದು ಹಾಕಿರಬಹುದು ಎಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಹೀಗಾಗಿ ಆ ಭಾಗದ ಎಲ್ಲ ಅಂಗಡಿಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಈ ದಂಪತಿಗೆ 4 ಹೆಣ್ಣು ಮಕ್ಕಳು ಮತ್ತು 1 ಮಗ ಇದ್ದು, ಒಂದು ಮನೆಯಲ್ಲಿ 7 ಜನರು ವಾಸಿಸುತ್ತಿದ್ದು, ಕುಟುಂಬವು ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಬಡತನದಿಂದ ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ. ಈ ವೇಳೆ ಕಾಗೆಗಳನ್ನು ಕೊಂದಿರುವ ಘಟನೆಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡಿನ ಆರೋಗ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ತಿಳಿಸಿದ್ದಾರೆ.
Click