ನ್ಯೂಸ್ ನಾಟೌಟ್: ಕಾಂಗ್ರೆಸ್ ಪಕ್ಷವು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಎಂದು ಆರೋಪಿಸಿ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಇಂದು ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಕೆಳಗೆ ಬಿದ್ದಿದ್ದು, ರಾಹುಲ್ ಗಾಂಧಿ ನನ್ನನ್ನು ತಳ್ಳಿದ್ದರಿಂದಲೇ ನನಗೆ ಗಾಯವಾಗಿದೆ ಎಂದು ಆರೋಪಿಸಿದ್ದಾರೆ.
ಬಿಆರ್ ಅಂಬೇಡ್ಕರ್ ಅವರ ಕುರಿತು ಹೇಳಿಕೆ ನೀಡಿದ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಕೂಟ ಬಣದ ಹಲವಾರು ಸಂಸದರು ಬುಧವಾರ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಆರಂಭಿಸಿತ್ತು. ಸಂಸತ್ತಿನ ಮಕರ ದ್ವಾರದ ಮುಂದೆ ಪ್ರತಿಭಟನಾನಿರತ ವಿಪಕ್ಷಗಳು ಮತ್ತು ಬಿಜೆಪಿ ಸಂಸದರು ಮುಖಾಮುಖಿಯಾದಾಗ ಗದ್ದಲ ಉಂಟಾಗಿದ್ದು ಈ ವೇಳೆ ಘಟನೆ ನಡೆದಿದೆ. ಘಟನೆಯಲ್ಲಿ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರು ಕೆಳಗೆ ಬಿದ್ದು ತಲೆಗೆ ಸಣ್ಣ ಗಾಯವಾಗಿದೆ ಎಂದು ವರದಿಯಾಗಿದೆ.
ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಕಾಂಗ್ರೆಸ್ ಸಂಸದ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೇಲೆ ಗಂಭೀರ ಆರೋಪ ಮಾಡಿದ್ದು, ಅವರು ನನ್ನನ್ನು ತಳ್ಳಿದ್ದರಿಂದ ಕೆಳಗೆ ಬಿದ್ದು ಗಾಯವಾಗಿದೆ ಎಂದು ಆರೋಪಿಸಿದ್ದಾರೆ.
ಈ ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿಯವರು, ನಾನು ಸಂಸತ್ ಪ್ರವೇಶಿಸಲು ಹೋದಾಗ ಕೆಲ ಬಿಜೆಪಿ ಸಂಸದರು ನನ್ನನ್ನು ತಡೆದರು. ತಳ್ಳಿದರು, ಬಳಿಕ ಬೆದರಿಕೆ ಹಾಕಿದರು ಎಂದು ಹೇಳಿದ್ದಾರೆ.
Click