ನ್ಯೂಸ್ ನಾಟೌಟ್ : ರಾಜ್ಯದಲ್ಲಿ ಈ ಹಿಂದೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ನೂರಾರು ರೈತರ ಜಮೀನನ್ನು ವಕ್ಫ್ ಗೆ ಹಸ್ತಾಂತರ ಮಾಡಲಾಗಿದೆ. ಈ ಕುರಿತಂತೆ ಶೀಘ್ರವೇ ದಾಖಲೆ ಬಿಡುಗಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, “ವಕ್ಪ್ ಆಸ್ತಿ ವಿಚಾರದಲ್ಲಿ ಸುಬಗರ ಸೋಗು ಹಾಕುವುದೇನು ಬೇಡ. ನಿಮ್ಮದೇ ಪಕ್ಷದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಈಗಿನ ನಿಮ್ಮ ಮಿತ್ರ ಪಕ್ಷವಾದ ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ನೂರಾರು ರೈತ ಕುಟುಂಬಗಳ ಆಸ್ತಿಗಳನ್ನು ವಕ್ಪ್ ಬೋರ್ಡ್ ಗೆ ಖಾತೆ ಬದಲಾಯಿಸಿದ ದಾಖಲೆಗಳನ್ನು ಶೀಘ್ರದಲ್ಲಿ ನಾವು ಬಿಡುಗಡೆ ಮಾಡುತ್ತೇವೆ. ಆಗ ನಿಮ್ಮ ಪಾಪದ ಫಲವನ್ನು ನೀವೇ ಉಣ್ಣಬೇಕಾಗುವ ಸಂದರ್ಭ ಬರಬಹುದು..!! ಅದಕ್ಕೆ ಸಿದ್ಧರಾಗಿರಿ’’ ಎಂದು ಹೇಳಿದ್ದಾರೆ.
ಬಹಿರಂಗ ಚರ್ಚೆಗೆ ಬರಬೇಕೆಂದು ಆಹ್ವಾನಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, “ಬಹಿರಂಗ ಚರ್ಚೆಗೆ ಸಿದ್ಧ ಎಂದು ನೀವು ಹಾಕಿರುವ ಸವಾಲನ್ನು ಗಮನಿಸಿದೆ. ನನ್ನ ಜೊತೆ ಚರ್ಚೆ ನಡೆಸುವ ಮೊದಲು ನಿಮ್ಮದೇ ಪಕ್ಷದ ನಾಯಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರ ಜೊತೆ ಒಂದು ಸುತ್ತು ಚರ್ಚೆ ಮಾಡಿಕೊಂಡು ಬನ್ನಿ’’ ಎಂದು ತಿಳಿಸಿದ್ದಾರೆ. ಇದರ ಜೊತೆ “ನಿಮ್ಮ ಪೂಜ್ಯ ತಂದೆಯವರನ್ನು ಮುಖ್ಯಮಂತ್ರಿ ಮಾಡಲು ನೀವು ಬಿಜೆಪಿ ಹೈಕಮಾಂಡ್ ಗೆ ಎರಡು ಸಾವಿರ ಕೋಟಿ ರೂಪಾಯಿ ನೀಡಿದ್ದೀರಿ..!! ನಿಮ್ಮನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಇನ್ನೂ ಒಂದಷ್ಟು ಕೋಟಿ ರೂಪಾಯಿ ನೀಡಿದ್ದೀರಿ..!! ಎಂದು ನಿಮ್ಮ ನಾಯಕರೇ ಆರೋಪಿಸಿದ್ದಾರೆ” ಎಂದು ಸಿಎಂ ತಿಳಿಸಿದ್ದಾರೆ.