ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ದಿಲ್ಲಿ-ಲಕ್ನೊ ಹೆದ್ದಾರಿ ಬದಿಯಲ್ಲಿ ಕೆಂಪು ಬಣ್ಣದ ಸೂಟ್ಕೇಸ್ನಲ್ಲಿ ಮಹಿಳೆಯ ಮೃತದೇಹ ಶನಿವಾರ ಪತ್ತೆಯಾಗಿದೆ.
ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಆ ಸೂಟ್ ಕೇಸ್ ತೆರೆದಾಗ, ದೇಹದ ಮೇಲೆಲ್ಲ ಗಾಯಗಳಾಗಿದ್ದ ಮಹಿಳೆಯೊಬ್ಬರ ಮೃತದೇಹವೊಂದು ಕಂಡು ಬಂದಿದೆ. ಮೃತ ಮಹಿಳೆಗೆ 25ರಿಂದ 30 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕುರಿತು ಪ್ರಾಥಮಿಕ ಮಾಹಿತಿ ದೊರೆಯುತ್ತಿದ್ದಂತೆಯೇ, ವಿಧಿವಿಜ್ಞಾನ ತಜ್ಞರೊಂದಿಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಪೊಲೀಸರು ತಮ್ಮ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಸೂಟ್ ಕೇಸ್ ನಿಂದ ಮಹಿಳೆಯ ಮೃತದೇಹವನ್ನು ಹೊರತೆಗೆದ ನಂತರ, ಅದರಲ್ಲಿ ಕೆಲವು ಬಟ್ಟೆಗಳೂ ಇರುವುದು ಕಂಡು ಬಂದಿದೆ. ಮಹಿಳೆಯ ದೇಹದ ಮೇಲೆ ಕಂಡು ಬಂದಿರುವ ಗಾಯಗಳ ಪ್ರಕಾರ, ಆಕೆಯ ಮೃತದೇಹ ಪತ್ತೆಯಾಗುವುದಕ್ಕೂ ಸುಮಾರು ಒಂದು ದಿನ ಮುಂಚೆ ಮೃತಪಟ್ಟಿರಬಹುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಭಟ್ನಾಗರ್ ಶಂಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಕೈಗೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.