ನ್ಯೂಸ್ ನಾಟೌಟ್: ವೃದ್ಧ ವ್ಯಕ್ತಿಯ ಆರೈಕೆಗೆಂದು ಬಂದ ಹೋಮ್ ನರ್ಸ್ ಮನೆಯಲ್ಲಿದ್ದ ಚಿನ್ನ, ವಜ್ರಾಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ಉಡುಪಿಯ ಬಡಗಬೆಟ್ಟು ಎಂಬಲ್ಲಿ ನಡೆದಿದೆ.
ಉಡುಪಿಯ ಬಡಗುಬೆಟ್ಟುವಿನ ಪ್ರಸಾದ್ (57) ಎಂಬುವರು 15 ದಿನಗಳ ಹಿಂದೆ ತಮ್ಮ ತಂದೆಯ ಆರೈಕೆಗಾಗಿ ಉಡುಪಿಯ ಪರ್ಕಳ ಪ್ರದೇಶದಲ್ಲಿನ ಹೆಲ್ತ್ ಕೇರ್ ಸರ್ವೀಸ್ ಮೂಲಕ ಹೋಮ್ ನರ್ಸ್ ಸಿದ್ದಪ್ಪ ಕೆ. ಕೋಡ್ಲಿ ಅವರನ್ನು ನೇಮಿಸಿಕೊಂಡಿದ್ದರು. ನ. 17 ರಂದು ಬೆಳಗ್ಗೆ 9.15 ರಿಂದ ಮಧ್ಯಾಹ್ನ 1.15 ರ ನಡುವೆ, ಸಿದ್ದಪ್ಪ ಅವರು ಮನೆಯ ಹಾಲ್ನ ಗಾಜಿನ ರ್ಯಾಕ್ನಲ್ಲಿ ಇರಿಸಲಾಗಿದ್ದ ಅಂದಾಜು 43,800 ಮೌಲ್ಯದ 6 ಗ್ರಾಂ ವಜ್ರದ ಕಿವಿಯೋಲೆ, ಜೊತೆಗೆ ಮಲಗುವ ಕೋಣೆಯಲ್ಲಿದ್ದ ರಹಸ್ಯ ಲಾಕರ್ನಿಂದ 31,17,100 ಮೌಲ್ಯದ ಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಕಳವಾದ ವಸ್ತುಗಳ ಒಟ್ಟು ತೂಕ 427 ಗ್ರಾಂ ಎಂದು ಅಂದಾಜಿಸಲಾಗಿದೆ.
ಪ್ರಸಾದ್ ಅವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 194/2024 ಕಲಂ 306 ಬಿ.ಎನ್.ಎಸ್. ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿ ಪತ್ತೆಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.