ನ್ಯೂಸ್ ನಾಟೌಟ್: 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ತಮಿಳು ಚಿತ್ರರಂಗದ ಪ್ರಸಿದ್ಧ ನಟ ಡೆಲ್ಲಿ ಗಣೇಶ್ ಶನಿವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ 80 ವರ್ಷ ವಯಸ್ಸಾಗಿತ್ತು.
ಡೆಲ್ಲಿ ಗಣೇಶ್ ಸಾವಿನ ಬಗ್ಗೆ ಪುತ್ರ ಮಹದೇವನ್ ಸಾಮಾಜಿಕ ಜಾಲತಾಣದಲ್ಲಿ, “ನಮ್ಮ ತಂದೆ ಡೆಲ್ಲಿ ಗಣೇಶ್ ಅವರು ನವೆಂಬರ್ 9ರಂದು ರಾತ್ರಿ 11 ಗಂಟೆಗೆ ನಿಧನರಾದರು ಎಂದು ಹೇಳಲು ವಿಷಾಧಿಸುತ್ತೇನೆ” ಎಂದು ತಿಳಿಸಿದ್ದಾರೆ.
ಪಾರ್ಥಿವ ಶರೀರವನ್ನು ಚೆನ್ನೈನ ರಾಂಪುರದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಅಂತ್ಯಕ್ರಿಯೆ ನ.11ರಂದು ಬೆಳಗ್ಗೆ ನಡೆದಿದೆ.
ದೆಹಲಿಯ ದಕ್ಷಿಣ ಭಾರತ್ ನಾಟಕ ಸಭಾದಲ್ಲಿ ಸಕ್ರಿಯರಾಗಿದ್ದ ಗಣೇಶನ್, ಭಾರತೀಯ ವಾಯುಸೇನೆ ಹುದ್ದೆ ತೊರೆದು ತಮಿಳು ಚಿತ್ರರಂಗ ಪ್ರವೇಶಿಸಿದ್ದರು. 1976ರಲ್ಲಿ ನಿರ್ದೇಶಕ ಬಾಲಚಂದರ್ ಅವರ ‘ಪತ್ತಿನ ಪ್ರವೇಶಂ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಬಾಲಚಂದರ್ ಅವರೇ ಡೆಲ್ಲಿ ಗಣೇಶ್ ಎಂದು ಸ್ಟೇಜ್ ನೇಮ್ ನೀಡಿದ್ದರು.
ಡೆಲ್ಲಿ ಗಣೇಶ್ ನಾಲ್ಕು ದಶಕಗಳ ತಮ್ಮ ಸಿನಿಪಯಣದಲ್ಲಿ ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.
Click