ನ್ಯೂಸ್ ನಾಟೌಟ್: ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿ ಸುಳ್ಯದ ಮುಖ್ಯ ಪೇಟೆಯಲ್ಲಿ ಪ್ರತಿ ಸಲವೂ ಟ್ರಾಫಿಕ್ ಜಾಮ್ ನದ್ದೇ ದೊಡ್ಡ ಕಿರಿಕಿರಿ, ಬೆಳಗ್ಗೆ -ಸಂಜೆ ಆದರೆ ಸಾಕು ಬೆಂಗಳೂರನ್ನೇ ಮೀರಿಸುವ ಪೈಪೋಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ.
ಅಲ್ಲಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದು ಒಂದು ಕಥೆಯಾದರೆ ಕಿರಿದಾದ ಜಾಗದಲ್ಲಿ ಒಂದು ಸೈಡ್ ಕೊಟ್ಟು ಹೋಗುವುದಕ್ಕೂ ಜಾಗ ಇಲ್ಲ. ಇದರಿಂದ ಸಾರ್ವಜನಿಕರು, ವಾಹನ ಸವಾರರು ನಿತ್ಯ ನರಕ ಅನುಭವಿಸುವಂತಾಗಿದೆ. ಸುಳ್ಯದ ಶ್ರೀ ರಾಮ ಪೇಟೆ ಬಳಿ ಕೆಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಜನ ಕಿರಿಕಿರಿ ಅನುಭವಿಸಿ ಹಿಡಿಶಾಪ ಹಾಕುತ್ತಿದ್ದದ್ದು ಸಾಮಾನ್ಯವಾಗಿತ್ತು.
ಇದನ್ನು ಅಗಲೀಕರಣ ಮಾಡುವ ವಿಚಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ್ದಾದರೂ ನಮ್ಮ ನಾಯಕರು ಯಾರು ಕೂಡ ಈ ಬಗ್ಗೆ ತಲೆಕೆಡಿಸಿಕೊಂಡು ಸದನದಲ್ಲೋ, ಪರಿಷತ್ ನಲ್ಲೂ ಮಾತನಾಡುವ ಕೆಲಸವನ್ನೇ ಮಾಡುವುದಿಲ್ಲ. ಸುಳ್ಯದ ಜನರ ಜೊತೆಗೆ ಹೊರಗಿನವರು ಕೂಡ ನಿತ್ಯ ರಸ್ತೆಯಲ್ಲಿ ಹೋಗುವಾಗ ಗೊಣಗಿಗೊಂಡು ಡ್ರೈವಿಂಗ್ ಮಾಡಬೇಕಾದ ಸ್ಥಿತಿ ಇರುವುದು ವಿಪರ್ಯಾಸ. ಇದೆಲ್ಲ ಸರಿ ಆಗಲು ಯಾವಾಗ ಕಾಲ ಕೂಡಿ ಬರುತ್ತೋ ಅನ್ನುವುದನ್ನು ಕಾದು ನೋಡಬೇಕಿದೆ.