ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ಸುಳ್ಯ ಸರ್ಕಾರಿ ಆಸ್ಪತ್ರೆಯ ವಿಚಾರ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಪಾರ್ಕಿಂಗ್ ವಿಚಾರದಿಂದಲೇ ಶುರುವಾದ ವಾದ-ವಿವಾದ ಇದೀಗ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ.
ನ.19 ರಂದು ಸುಳ್ಯ ತಾಲೂಕು ಆಂಬ್ಯುಲೆನ್ಸ್ ಚಾಲಕ ಮಾಲಕ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮದ ಕುರಿತು ಚರ್ಚಿಸಲು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿಗೆ ಮೀಸಲಾಗಿದ್ದ ಸ್ಥಳದಲ್ಲಿ ಇವರು ತಮ್ಮ ಆಂಬ್ಯುಲೆನ್ಸ್ ಪಾರ್ಕಿಂಗ್ ಮಾಡಿದ್ದರು. ಈ ವಿಚಾರವಾಗಿ ಗೊಂದಲಕ್ಕೆ ಎಡ ಮಾಡಿಕೊಟ್ಟಿತ್ತು. ಈ ಕುರಿತಂತೆ ಇದೀಗ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿಯವರು ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ.
‘ಅಂದು ಸಂಜೆ ಸಿಬ್ಬಂದಿಗೆ ಮೀಸಲಾದ ಸ್ಥಳದಲ್ಲಿ ಇತರ ವಾಹನಗಳು ಇರದ ಕಾರಣ ಪಾರ್ಕಿಂಗ್ ಮಾಡಿದ್ದಾರೆ. ಈ ವಿಚಾರದಿಂದ ಯಾವುದೇ ಸಿಬ್ಬಂದಿಗೆ ಅನಾನುಕೂಲ ಆಗಿರುವುದಿಲ್ಲ. ಅವರು 10 ನಿಮಿಷಗಳಲ್ಲಿ ವಾಹನ ತೆರವುಗೊಳಿಸಿದ್ದಾರೆ. ಈ ಕುರಿತಂತೆ ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ-ಮಾಲಕರ ಸಂಘ ಸುಳ್ಯ ಇದರ ಪದಾಧಿಕಾರಿಗಳು ತಾಲೂಕು ಆಸ್ಪತ್ರೆ ಸುಳ್ಯ ಇದರ ಆಡಳಿತ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿ ತಾಲೂಕು ಆಸ್ಪತ್ರೆ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸಲಾಗಿದೆ’ ಎಂದು ತಿಳಿಸಲಾಗಿದೆ. ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇದರ ಸಂಚಾಲಕ ಕರೀಮ್ ಕದ್ಕಾರ್ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಕರೆದುಕೊಂಡು ಬರುವ ಆಂಬ್ಯುಲೆನ್ಸ್ ನಿಲ್ಲುವ ಜಾಗದಲ್ಲಿ ಸಿಬ್ಬಂದಿ ಕಾರು ನಿಂತಿದ್ದು ಕೂಡ ಫೋಟೋ ವೈರಲ್ ಆಗಿ ಟೀಕೆಗೆ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.