ಉಪಚುನಾವಣೆ ಮತದಾನದ ಮರುದಿನವೇ ಕಾಲುವೆಯಲ್ಲಿ ಬ್ಯಾಲೆಟ್ ಬಾಕ್ಸ್‌ ಗಳು ಪತ್ತೆ..!ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಹೇಳಿದ್ದೇನು..?

ನ್ಯೂಸ್ ನಾಟೌಟ್: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆದು ಮರುದಿನವೇ ಹಾವೇರಿ ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಖಾಲಿ ಸೈಟ್ ​ನ ಕಾಲುವೆಯಲ್ಲಿ 10 ಬ್ಯಾಲೆಟ್ ಬಾಕ್ಸ್ ​ಗಳು ಪತ್ತೆಯಾದ ಘಟನೆ ನಡೆದಿದೆ. ಬುಧವಾರವಷ್ಟೇ ಶಿಗ್ಗಾಂವಿ ಉಪಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮರುದಿನವೇ ಕಾಲುವೆಯಲ್ಲಿ ಬ್ಯಾಲೆಟ್ ಬಾಕ್ಸ್​ಗಳು ಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಶಿಗ್ಗಾಂವಿ ಉಪಚುನಾವಣೆಗೂ ಮತ್ತು ಈ ಬ್ಯಾಲೆಟ್​ ಬಾಕ್ಸ್ ​ಗಳಿಗೂ ಸಂಬಂಧ ಇಲ್ಲ ಎಂದಿದ್ದಾರೆ. ಉಪಚುನಾವಣೆಯಲ್ಲಿ ಇವಿಎಂ ಬಳಸಲಾಗಿದೆ. ಈ ಬ್ಯಾಲೆಟ್ ಬಾಕ್ಸಗಳು ನಿರುಪಯಕ್ತವಾಗಿದ್ದವು. ಹಲವು ವರ್ಷಗಳಿಂದ ಬಳಕೆಯಾಗಿರಲಿಲ್ಲ. ಹೀಗಾಗಿ, ಎಪಿಎಂಸಿಯಲ್ಲಿರುವ ಒಂದು ಹಳೆ ಗೋದಾಮಿನಲ್ಲಿ ಇಡಲಾಗಿದೆ ಎಂದು ತಿಳಿಸಿದರು. ಹಲವು ವರ್ಷಗಳ ಹಿಂದೆಯೇ ಗೋದಾಮಿನಲ್ಲಿ ತಂದಿಡಲಾಗಿತ್ತು. ಕಿಡಿಗೇಡಿಗಳು ಬಾಕ್ಸ್ ​ಗಳನ್ನು ಮಾರುವ ಉದ್ದೇಶದಿಂದ ಕಳ್ಳತನ ಮಾಡಿದ್ದಾರೆ. ಆದರೆ, ಸಾಗಿಸಲು ಸಾಧ್ಯವಾಗದೇ, ಕಾಲುವೆಯಲ್ಲಿ ಬಿಸಾಕಿ ಹೋಗಿದ್ದಾರೆ ಎಂದಿದ್ದಾರೆ. ಬಳಕೆಯಲ್ಲಿ ಇಲ್ಲದ ಬ್ಯಾಲೆಟ್ ಬಾಕ್ಸ್​ಗಳನ್ನು ಇಟ್ಟಿದ್ದ ಗೋದಾಮಿಗೆ ಭೇಟಿ ನೀಡಿದ ಪೊಲೀಸರು ಮತ್ತು ಹಾವೇರಿ ತಹಶೀಲ್ದಾರ್ ಶರಣಮ್ಮ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪೊಲೀಸರು ಕಂದಾಯ ಇಲಾಖೆಯವರಿಂದ ದೂರು ಪಡೆದು ತನಿಖೆ ಮುಂದುವರೆಸಿದ್ದಾರೆ.