ನ್ಯೂಸ್ ನಾಟೌಟ್: ರೈಲು ಎಂಜಿನ್ ಮತ್ತು ಬೋಗಿ ನಡುವೆ ಸಿಲುಕಿ ರೈಲ್ವೆಯ ಡಿ ಗ್ರೂಪ್ ಉದ್ಯೋಗಿಯೊಬ್ಬರು ಮೃತಪಟ್ಟಿರುವ ಭೀಕರ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯ ಬರೌನಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಸಮಸ್ತಿಪುರದ 25 ವರ್ಷದ ಅಮರ್ ಕುಮಾರ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಫ್ಲಾಟ್ ಫಾರ್ಮ್ 5ರಲ್ಲಿ ನಿಂತಿದ್ದ ಲಖನೌ–ಬರೌನಿ ಎಕ್ಸ್ ಪ್ರೆಸ್ ರೈಲಿನ ಎಂಜಿನ್ ಮತ್ತು ರೈಲಿನ ಬೋಗಿಯನ್ನು ಜೋಡಿಸುವ ಕೆಲಸವನ್ನು ಶನಿವಾರ ಬೆಳಿಗ್ಗೆ 8.10 ರ ಸುಮಾರಿಗೆ ಅಮರ್ ಕುಮಾರ್ ನಿರ್ವಹಿಸುತ್ತಿದ್ದರು. ಈ ವೇಳೆ ಪ್ಲೇಟ್ ಗಳ ನಡುವೆ ಸಿಲುಕಿದ ಅಮರ್ ಕುಮಾರ್, ಅಪ್ಪಚ್ಚಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರೈಲ್ವೆಯ ಸಹೋದ್ಯೋಗಿಗಳ ಎಡವಟ್ಟಿನಿಂದ ಈ ದುರಂತ ಸಂಭವಿಸಿದೆ ಎಂದು ಪೂರ್ವ ಕೇಂದ್ರ ವಲಯದ ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪಾಯಿಂಟ್ ಮೆನ್ ಗಳ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
Click