ನ್ಯೂಸ್ ನಾಟೌಟ್: ಅಂಗಡಿಗೆ ಬಂದಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬದ್ರುದ್ದೀನ್ ಯಾನೆ ಬದ್ರು ಎಂಬಾತನ ಕೃತ್ಯ ಸಾಬೀತಾಗಿದ್ದು, ಇದೀಗ ತಪ್ಪಿತಸ್ಥನಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಪುತ್ತೂರು ಹೆಚ್ಚುವರಿ ಹಿರಿಯ ಪ್ರಧಾನ ವ್ಯವಹಾರಿಕ ನ್ಯಾಯಾಧೀಶ ದೇವರಾಜ್ ಅರಸ್ ವೈ.ಎಚ್. ಅವರ ಪೀಠ ತೀರ್ಪು ನೀಡಿದೆ.
ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ ಗೆ ತನ್ನ 7 ವರ್ಷದ ಮಗಳೊಂದಿಗೆ ಬಂದಿದ್ದ ಮಹಿಳೆ ತಿಂಡಿ ಖರೀದಿಸಿ ಅಂಗಡಿಯವನಿಗೆ ಹಣ ನೀಡುತ್ತಿದ್ದ ವೇಳೆ ಆರೋಪಿ ಬದ್ರುದ್ದೀನ್ ಯಾನೆ ಬದ್ರು ಅಂಗಡಿಯೊಳಗೆ ಬಂದು ಮಹಿಳೆಯ ಮಾನಭಂಗಕ್ಕೆ ಯತ್ನ ಮಾಡಿದ್ದಾನೆ. ಬಳಿಕ ಮಹಿಳೆ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ಕಲಂ 354 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಂಪ್ಯ ಪೊಲೀಸ್ ಠಾಣೆಯ ಆಗಿನ ಎಸ್ಐ ರಾಮಕೃಷ್ಣ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2 ವರ್ಷ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ದಂಡದ ಹಣದಲ್ಲಿ 5 ಸಾವಿರ ರೂ. ಅನ್ನು ಸಂತ್ರಸ್ತೆಗೆ ನೀಡುವಂತೆಯೂ ಆದೇಶಿಸಲಾಗಿದೆ. ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕಿ ಚೇತನಾದೇವಿ ಬೋಳೂರು ವಾದಿಸಿದ್ದರು.