ನ್ಯೂಸ್ ನಾಟೌಟ್: ಒಂದು ಮನೆಕಟ್ಟಿ ನೋಡುವುದರಲ್ಲಿ ಜೀವನವೇ ಕುಸಿದು ಹೋಗಿರುತ್ತದೆ. ಮೈ ತುಂಬ ಸಾಲ ಆಗಿರುತ್ತದೆ. ಈ ನಡುವೆ ಇದೀಗ ಕೆಂಪು ಕಲ್ಲಿನ ದರವನ್ನು 2 ರಿಂದ 3 ರೂ. ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಕೆಂಪು ಕಲ್ಲು ಲಾರಿ ಮಾಲಕ ಚಾಲಕ ಸಂಘ ಸಂಪಾಜೆ ಪ್ರಕಟಣೆಯಲ್ಲಿ ಈ ವಿಚಾರವನ್ನು ತಿಳಿಸಿದೆ.
ಒಂದು ಕಲ್ಲಿನಲ್ಲಿ 2 ರಿಂದ 3 ರೂ. ಹೆಚ್ಚಳವಾದರೆ ಮುಂದೆ ಸಾವಿರ ಕಲ್ಲು ತೆಗೆದುಕೊಳ್ಳುವಾಗ ಎಷ್ಟು ಹೆಚ್ಚಾಗಬಹುದು ಅನ್ನುವ ಕಲ್ಪನೆಯನ್ನು ಒಮ್ಮೆ ಮಾಡಿಕೊಂಡರೆ ಸಾಕು. ಸುಳ್ಯ , ಪುತ್ತೂರು, ಮಡಿಕೇರಿ, ಕುಶಾಲನಗರಕ್ಕೆ ಕಲ್ಲುಗಳು ಸುಳ್ಯ ತಾಲೂಕಿನ ವ್ಯಾಪ್ತಿಯಿಂದ ಲಾರಿಗಳಲ್ಲಿ ತೆಗೆದುಕೊಂಡು ಹೋಗಲಾಗುತ್ತಿದೆ. ಕಲ್ಲಿನ ಕೋರೆಯಲ್ಲಿ ಈಗಾಗಲೇ ದರವನ್ನು ಹೆಚ್ಚು ಮಾಡಲಾಗಿದೆ. ಮತ್ತೊಂದು ಕಡೆಯಿಂದ ಇಂಧನ ದರವೂ ಹೆಚ್ಚಾಗಿದೆ. ಇದರಿಂದಾಗಿ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಈ ನಡುವೆ ಕೆಲವರು ಕಡಿಮೆಗೆ ಕಲ್ಲು ಸಾಗಾಟವನ್ನು ಮಾಡುತ್ತಿದ್ದರು. ಇದೆಲ್ಲ ಬೆಳವಣಿಗೆಯ ಬಳಿಕ ಸಭೆ ಸೇರಿ ಒಮ್ಮತದ ನಿರ್ಧಾರದ ಮೂಲಕ ಬೆಲೆ ಏರಿಕೆ ಮಾಡುವುದನ್ನು ನಿರ್ಧರಿಸಲಾಗಿದೆ, ಈ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕ ಗುತ್ತಿಗೆದಾರು ಹಾಗೂ ಮನೆ, ಇನ್ನಿತರ ಕಟ್ಟಡ ಕಾರ್ಮಿಕರು ಸಹಕಾರ ನೀಡಬೇಕೆಂದು ವಿನಂತಿಸಲಾಗಿದೆ.