ನ್ಯೂಸ್ ನಾಟೌಟ್: ಮೊಬೈಲ್ ಫೋನ್ ಕೊಡುವಂತೆ ಹಠಹಿಡಿದ ಪುತ್ರನನ್ನು ಸಮದಾನಿಸುವ ಬದಲು ತಂದೆಯೇ ಆತನ ಮೇಲೆ ಹಲ್ಲೆ ಮಾಡಿ ಮಗನನ್ನು ಕೊಂದ ಅಮಾನವೀಯ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ಶುಕ್ರವಾರ (ನ.15) ರಾತ್ರಿ ಸಂಭವಿಸಿದೆ.
ತಂದೆಯಿಂದಲೇ ಜೀವ ಕಳೆದುಕೊಂಡ ಮಗನನ್ನು ತೇಜಸ್ (14) ಎಂದು ಗುರುತಿಸಲಾಗಿದೆ. ಮಗನನ್ನೇ ಕೊಂದ ಆರೋಪಿ ರವಿಕುಮಾರ್ ಆಗಿದ್ದಾನೆ. ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತಂತೆ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಆಗಿದೆ. ಆರೋಪಿ ರವಿ ಕುಮಾರ್ ಗೆ ಮದ್ಯ ಸೇವನೆಯ ಚಟವಿತ್ತು. ಜತೆಗೆ ಕೋಪದ ಕೈಗೆ ಬುದ್ಧಿ ಕೊಟ್ಟು ಮನಸೋ ಇಚ್ಛೆ ಹಲ್ಲೆ ಮಾಡಿದ್ದರಿಂದಲೇ ಮಗನ ಪ್ರಾಣಪಕ್ಷಿ ಹಾರಿ ಹೋಗಿದೆ.
ಆರೋಪಿ ರವಿ ಕುಮಾರ್ ಬೆಂಗಳೂರಿನಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಾ ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಅಪ್ಪನಿಗೆ ಪ್ರತಿನಿತ್ಯ ಒಂದೊಂದೇ ಬೇಡಿಕೆ ಇಡುತ್ತಿದ್ದ ಮಗನಿಂದ ಅಪ್ಪನಿಗೆ ಬೇಸರ ಉಂಟಾಗುತ್ತಿತ್ತು. ಆದರೆ, ಇತ್ತೀಚೆಗೆ ಅಪ್ಪಾ.. ನನ್ನ ಎಲ್ಲ ಫ್ರೆಂಡ್ಸ್ ಬಳಿ ಮೊಬೈಲ್ ಇದೆ. ನೀನು ನನಗೆ ಹೊಸ ಫೋನ್ ಕೊಡಿಸು ಎಂದಿದ್ದಾನೆ. ನಿನಗೆ ಹೊಸ ಫೋನ್ ಕೊಡಿಸಲು ಆಗದಿದ್ದರೆ, ಮನೆಯಲ್ಲಿ ಒಂದು ಹಳೆಯ ಫೋನ್ ಇದೆಯಲ್ಲ ಅದನ್ನಾದರೂ ರಿಪೇರಿ ಮಾಡಿಸಿ ಕೊಡು ಎಂದು ಕೇಳಿದ್ದಾನೆ. ಅಪ್ಪ ಇದಕ್ಕೆ ಸೊಪ್ಪು ಹಾಕದಿದ್ದಾಗ, ಮೊಬೈಲ್ ರಿಪೇರಿ ಮಾಡಿಸು ಅಂತ ಮಗ ತೇಜಸ್ ಹಠ ಮಾಡಲು ಆರಂಭಿಸಿದ್ದಾನೆ.
ತನಗೆ ಬರುವ ಸ್ವಲ್ಪ ಆದಾಯದಿಂದ ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟವಾಗಿರುವಾಗ ಇನ್ನು ಮಗನ ಇಷ್ಟಗಳನ್ನು ಈಡೇರಿಸಲು ಅಪ್ಪನಿಗೆ ಇಷ್ಟವಿರಲಿಲ್ಲ. ಹೀಗಾಗಿ, ರವಿಕುಮಾರ್ ಕೆಲಸ ಮುಗಿಸಿ ಮನೆಗೆ ಬರುವಾಗ ಕುಡಿದು ಬಂದು ಮಗನನ್ನು ಬೈಯುತ್ತಿದ್ದ. ಶುಕ್ರವಾರ ರಾತ್ರಿಯೂ ಮದ್ಯ ಸೇವಿಸಿ ಬಂದ ರವಿಕುಮಾರ್ ತನ್ನ ಮಗನಿಗೆ ಬೈಯಲು ಆರಂಭಿಸಿದ್ದಾನೆ. ಈ ಸಂದರ್ಭ ಮಗನ ಮೇಲೆ ಹಲ್ಲೆ ಮಾಡುವಾಗ ಆತನನ್ನು ಬ್ಯಾಟ್ನಿಂದ ಥಳಿಸಿ ಗೋಡೆಗೆ ತಳ್ಳಿದ್ದಾನೆ. ಆದರೆ, ಅಪ್ರಾಪ್ತ ಮಗ ತೇಜಸ್ ಅಪ್ಪ ದೂಡಿದ ರಭಸಕ್ಕೆ ಗೋಡೆಗೆ ಹೋಗಿ ತಲೆ ಹೊಡೆದುಕೊಂಡು ಅಲ್ಲಿಯೇ ರಕ್ತಸ್ರಾವ ಉಂಟಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದ ತಕ್ಷಣ ಮನೆಯವರು ಕೂಡಲೇ ಆತನನ್ನು ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಗ ತೇಜಸ್ ಸಾವಿಗೀಡಾಗಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಮೃತ ಬಾಲಕನ ತಂದೆ ರವಿಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.