ನ್ಯೂಸ್ ನಾಟೌಟ್ : ಈಗೀಗ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಿದೆ.ಇದಕ್ಕಾಗಿ ಹಲವಾರು ಸಾಹಸಗಳನ್ನು ಮಾಡುತ್ತಿರುತ್ತಾರೆ. ಅದರಲ್ಲಿ ಚಿತ್ರ ವಿಚಿತ್ರ ಸಾಹಸಗಳನ್ನು ಮಾಡಲು ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡವರೂ ಇದ್ದಾರೆ.ಹೀಗೆ ರೀಲ್ಸ್ ಮಾಡಲು ಹೋಗಿ ಪಜೀತಿಗೆ ಸಿಲುಕಿಕೊಂಡವರ ಬಗ್ಗೆ ವರದಿಗಳು ಬರುತ್ತಲೇ ಇವೆ. ಇದೀಗ ಇಂತಹದ್ದೇ ಘಟನೆಯೊಂದು ನಡೆದಿದ್ದು, ಯುವಕನೊಬ್ಬ ರೀಲ್ಸ್ಗಾಗಿ ಬೆಟ್ಟದ ತುದಿಯಲ್ಲಿ ನಿಂತು ಕಸರತ್ತು ಮಾಡಲು ಹೋಗಿದ್ದು, ಆತ ಬ್ಯಾಕ್ಫ್ಲಿಪ್ ಮಾಡುವ ಸಂದರ್ಭದಲ್ಲಿ ಆಯತಪ್ಪಿ ದೊಪ್ಪನೆ ಪ್ರಪಾತಕ್ಕೆ ಬಿದ್ದಿದ್ದಾನೆ. ಈ ಆಘಾತಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಯುವಕ ಸ್ಟೈಲ್ ಆಗಿ ಬ್ಯಾಕ್ಫ್ಲಿಪ್ ಮಾಡಲು ಹೋಗಿ ಆಯತಪ್ಪಿ ಬೆಟ್ಟದ ಕೆಳಗೆ ಬಿದ್ದಿದ್ದಾನೆ. ಈ ಘಟನೆ ಯಾವಾಗ, ಎಲ್ಲಿ ನಡೆದದ್ದು ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.ಈ ಕುರಿತ ಪೋಸ್ಟ್ ಒಂದನ್ನು cctividiots ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ʼಇನ್ನೊಬ್ಬ ಯುವಕ ಈ ಮೂರ್ಖನನ್ನು ಹಿಡಿಯಲು ಪ್ರಯತ್ನಿಸಿದನುʼ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ಹಂಚಿಕೊಂಡ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆತ ಬಿದ್ದ ಏಟಿಗೆ ಖಂಡಿತವಾಗಿಯೂ ಆತನ ಮೂಳೆಗಳು ಮುರಿದಿರುತ್ತವೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼವಿಡಿಯೋಗಾಗಿ ಜೀವವನ್ನೇ ಪಣಕ್ಕಿಡುವ ಅವಶ್ಯಕತೆ ಇತ್ತೇ?ʼ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆತ ಉದ್ದೇಶಪೂರ್ವಕವಾಗಿ ಮುಂದೆ ಓಡಿ ಬೆಟ್ಟದಿಂದ ಕೆಳಗೆ ಬಿದ್ದಂತಿದೆʼ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.