ನ್ಯೂಸ್ ನಾಟೌಟ್: ಕೊಡಗಿಗೆ ರೈಲು ನಿಲ್ದಾಣದ ಭಾಗ್ಯವಿಲ್ಲ, ಆದರೆ ಇರುವ ಏಕೈಕ ಮಕ್ಕಳ ಆಟದ ರೈಲು ನಿಲ್ದಾಣ ಈಗ ರೈಲು ಸಂಚಾರವಿಲ್ಲದೆ ಬಿಕೋ ಅನ್ನುತ್ತಿದೆ.
ಮಡಿಕೇರಿ ರಾಜಾಸೀಟ್ ಉದ್ಯಾನದಲ್ಲಿದ್ದ ಮಕ್ಕಳ ರೈಲು ನಿಂತು ವರ್ಷಗಳೇ ಉರುಳಿವೆ. ಈಗಲೂ ರೈಲಿನ ಅವಶೇಷಗಳನ್ನು ಉದ್ಯಾನದಲ್ಲಿ ಕಾಣಬಹುದು. ಇವುಗಳನ್ನು ಕಂಡಾಗ ಮಕ್ಕಳ ಮನಸ್ಸು ಮಾತ್ರವಲ್ಲ, ಹಿರಿಯ ಮನಸ್ಸೂ ಮಮ್ಮಲ ಮರುಗದೇ ಇರದು.
ಕೊಡಗು ಜಿಲ್ಲೆಯ ಮಕ್ಕಳು ರೈಲಿನ ಸಂಚಾರದ ಅನುಭವ ಪಡೆಯಲು ಈಗ ದೂರದ ಮೈಸೂರಿಗೆ ಹೋಗಬೇಕಿದೆ. ಇಲ್ಲಿನ ಮಕ್ಕಳೂ ರೈಲು ಸಂಚಾರದ ಖುಷಿ ಅನುಭವಿಸಲು ಇದ್ದ ಏಕೈಕ ರೈಲು ಈಗ ಮೂಲೆ ಸೇರಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿಯ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಕ್ಕಳ ರೈಲು ಇತಿಹಾಸದ ಪುಟ ಸೇರಿರುವುದು ಮಾತ್ರ ವಿಪರ್ಯಾಸ.
ಹಿರಿಯ ರಾಜಕೀಯ ನಾಯಕ ಎಂ.ಸಿ.ನಾಣಯ್ಯ ಶಾಸಕರಾಗುವುದಕ್ಕೂ ಮುನ್ನ ಪುರಸಭೆ ಅಧ್ಯಕ್ಷರಾಗಿದ್ದಾಗ ಬ್ರಿಟಿಷರ ಸಮಾಧಿಗಳನ್ನು ಸ್ಥಳಾಂತರ ಮಾಡಿ ನಿರ್ಮಿಸಿದ ಈ ಉದ್ಯಾನವನ್ನು ಮತ್ತೆ ಅವರೇ 1998ರಲ್ಲಿ ಅಭಿವೃದ್ಧಿಪಡಿಸಿದ್ದರು. ಅಂದು ಕೊಡಗಿನ ಉಸ್ತುವಾರಿ ಸಚಿವರಾಗಿದ್ದ ಅವರು, ಈ ಉದ್ಯಾನಕ್ಕೊಂದು ಹೊಸ ಯೋಜನೆ ರೂಪಿಸಿದ್ದರು.
ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ನಿಮಿತ್ತ ಮಕ್ಕಳು ಆಟವಾಡುವುದಕ್ಕೆಂದೇ ವಿಶೇಷ ಆಟಿಕೆಗಳ ಪರಿಕರಗಳನ್ನು ಅಳವಡಿಸಿದ್ದರು. ಒಂದೆಡೆ ಪೋಷಕರು ರಾಜಾಸೀಟ್ ಗುಡ್ಡದ ಮೇಲೆ ನಿಂತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದರೆ, ಮತ್ತೊಂದೆಡೆ ಮಕ್ಕಳು ಇಲ್ಲಿ ಆಟವಾಡುತ್ತಿದ್ದರು. ಈಗ ಆ ಅವಕಾಶಗಳೆಲ್ಲವೂ ಇಲ್ಲದಾಗಿದೆ.