ನ್ಯೂಸ್ ನಾಟೌಟ್: ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ರತಿ ವರ್ಷವೂ ಹಲವಾರು ಕೋಟಿ ರೂ. ಅನುದಾನಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಪ್ರಧಾನಿ ಮೋದಿಯವರು ಕೂಡ ಹಳ್ಳಿ ಹಳ್ಳಿಗೂ ರಸ್ತೆ ಆಗಬೇಕೆಂದು ತಮ್ಮ ಭಾಷಣದಲ್ಲಿ ಹೇಳುತ್ತಲೇ ಇದ್ದಾರೆ. ಆದರೆ ಕೆಲವು ಸಲ ದೇವರು ಕೊಟ್ಟರೂ ಪೂಜಾರಿ ಬಿಡ ಅನ್ನುವ ಮಾತಿದೆ. ಹಾಗೆಯೇ ಈ ಕಂಜರ್ಪಣೆ, ಮೂಕಮಲೆ, ಪೈಲಾರಿನ ಜನರು ಕಳೆದ 18 ವರ್ಷಗಳಿಂದ ಅಂಕುಡೊಂಕಿನ ಕಿತ್ತು ಹೋದ ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ನಿತ್ಯ ನರಕ ಪ್ರಯಾಣ ಮಾಡುತ್ತಿದ್ದಾರೆ.
ಅಮರಮುಡ್ನೂರು ಗ್ರಾಮ ಕುಕ್ಕುಜಡ್ಕದ ಚಾಮಡ್ಕ-ಪೈಲಾರು ರಸ್ತೆ ರಣಭಯಂಕರವಾಗಿದೆ. ಒಂದು ಸಲದ ಪ್ರಯಾಣದಲ್ಲಿ ಜೀವ ಬಾಯಿಗೆ ಬಂದು ಬಿಡುತ್ತದೆ. ಶಾಲೆ ಮಕ್ಕಳು, ಮಹಿಳೆಯರು, ಅನಾರೋಗ್ಯ ಪೀಡಿತರು, ವೃದ್ಧರು, ಇವರೆಲ್ಲ ನಿತ್ಯ ಪ್ರಯಾಣಿಸಲೇಬೇಕಾದ ಅನಿವಾರ್ಯ, ಚುನಾವಣೆ ನಡೆಯುತ್ತಿದೆ, ಸರ್ಕಾರ ಬದಲಾಗುತ್ತಿದೆ, ಜನ ಪ್ರತಿನಿಧಿಗಳು ಆಯ್ಕೆಯಾಗುತ್ತಿದ್ದಾರೆ, ಆದರೆ ರಸ್ತೆಗಳ ಸ್ಥಿತಿ ಅಂದು ಹೇಗಿದೆಯೋ ಇಂದಿಗೂ ಹಾಗೆಯೇ ಇದೆ. ಸ್ಥಳೀಯ ಪಂಚಾಯತ್, ಅಧ್ಯಕ್ಷರು, ವಾರ್ಡ್ ಸದಸ್ಯರು, ಪಿಡಿಓಗಳಿಗೆ ಹಲವು ಸಲ ಮನವಿ ಸಲ್ಲಿಸಿದರೂ ಯಾವುದೇ ಬದಲಾವಣೆ ಇದುವರೆಗೆ ಆಗಿಲ್ಲ.
ಇದೀಗ ಅಲ್ಲಿನ ಜನ ರೋಸಿ ಹೋಗಿದ್ದಾರೆ. ನೇರವಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಳಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಹಲವಾರು ವರ್ಷಗಳಿಂದ ಪ್ಯಾಥೆಟಿಕ್ ಆಗಿರುವ ಈ ಚಾಮಡ್ಕ – ಪೈಲಾರು ರಸ್ತೆಗೆ ಡಾಂಬರೀಕರಣ ವ್ಯವಸ್ಥೆ ಮಾಡಿ ಕೊಡುವಂತೆ ಮನವಿ ಮೂಲಕ ಒತ್ತಾಯಿಸಿದ್ದಾರೆ. ಅನುದಾನದ ಕೊರತೆಯಿಂದ ರಸ್ತೆಯ ದುರಸ್ತಿ ಕಾರ್ಯ ಅಥವಾ ಮರು ಡಾಂಬರೀಕರಣ ನಡೆದೇ ಇಲ್ಲ. ಕಳೆದ 12-15 ವರ್ಷಗಳಿಂದ ಡಾಂಬರು ರಸ್ತೆ ರಿಪೇರಿ ಸಹ ಆಗಿಲ್ಲ. ಬಂಟಮಲೆಯ ತಪ್ಪಲಿನ ಈ ರಸ್ತೆ ಕಲ್ಮಡ್ಕ ಕಡೆಯಿಂದ ಗುತ್ತಿಗಾರು ಜಬಳೆ ಕಡೆಗೆ ಸಂಪರ್ಕಿಸುವ ಅತೀ ಹತ್ತಿರದ ಮಾರ್ಗವಾಗಿದೆ. ದುರಸ್ತಿ ಕಂಡಲ್ಲಿ ಸಾವಿರಾರು ಜನರಿಗೆ ಸಹಾಯವಾಗಲಿದೆ. ಹೀಗಾಗಿ ಪೂರ್ತಿ ರಸ್ತೆಯನ್ನು ಅತ್ಯಂತ ಶೀಘ್ರವಾಗಿ ಆದ್ಯತೆಯ ಮೇರೆಗೆ ಮರುಡಾಂಬರೀಕರಣ/ ಕಾಂಕ್ರೀಟಿಕರಣ ಮಾಡಬೇಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.