ಪ್ರವಾಸಕ್ಕೆ ತೆರಳಿದ ಶಾಲಾ ವಿದ್ಯಾರ್ಥಿಗಳಿದ್ದ KSRTC ಬಸ್ ಪಲ್ಟಿ..! 60 ವಿದ್ಯಾರ್ಥಿಗಳು, 7 ಶಿಕ್ಷಕರು ಇದ್ದ ಬಸ್ ಅಪಘಾತ..!

ನ್ಯೂಸ್ ನಾಟೌಟ್: ಕಿಷ್ಕಿಂಧಾ ಅಂಜನಾದ್ರಿ ಹಾಗೂ ಹಂಪಿ ಪ್ರವಾಸಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಶಾಲಾ ಪ್ರವಾಸದ ಬಸ್ ಪಲ್ಟಿಯಾಗಿ ನಾಲ್ವರು ಮಕ್ಕಳಿಗೆ ತೀವ್ರ ಗಾಯವಾಗಿರುವ ಘಟನೆ ಗಂಗಾವತಿ ತಾಲೂಕಿನ ಪ್ರಗತಿ ನಗರದ ಬಳಿ ನ.28ರ ಗುರುವಾರ ಬೆಳಗಿನ ಜಾವ ನಡೆದಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ನಗರದಿಂದ ಶಾಲಾ ಪ್ರವಾಸದ ನಿಮಿತ್ತ ನ.27ರ ಬುಧವಾರ ರಾತ್ರಿ ಗುರುಮಿಠಕಲ್ ನಿಂದ ಗಂಗಾವತಿ ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿ ಹಾಗೂ ಹಂಪಿ ಶಾಲಾ ಪ್ರವಾಸಕ್ಕೆ ಹೊರಟಿತ್ತು.ಈ ಸಂದರ್ಭ ಬಸ್ ಚಾಲಕನ ನಿಯಂತ್ರಣ ತಪ್ಪಿ ಗಂಗಾವತಿ ತಾಲೂಕಿನ ಪ್ರಗತಿ ನಗರದ ಬಳಿ ಪಲ್ಟಿಯಾಗಿದ್ದು, ಈ ಪರಿಣಾಮ ಬಸ್‌ ನಲ್ಲಿದ್ದ ನಾಲ್ವರು ಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. 60 ವಿದ್ಯಾರ್ಥಿಗಳು, 7 ಶಿಕ್ಷಕರು ಇದ್ದ ಬಸ್ ಏಕಾಏಕಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಪಕ್ಕ ಇದ್ದ ತಗ್ಗಿಗೆ ಉರುಳಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕೂಡಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಮತ್ತು ಬಸ್ಸಿನಲ್ಲಿದ್ದ ಚಾಲಕ, ಶಿಕ್ಷಕರನ್ನು ಸಂರಕ್ಷಣೆ ಮಾಡಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕೆ ಸಾರಿಗೆ ಸಂಸ್ಥೆ ಅಧಿಕಾರಿಗಳು, ಪೊಲೀಸರು ಆಗಮಿಸಿ, ಬದಲಿ ಬಸ್ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳನ್ನು ಕಳುಹಿಸುತ್ತಿದ್ದಾರೆ.ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ. Click