ನ್ಯೂಸ್ ನಾಟೌಟ್: ಕಾರಿನೊಳಗೆ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟ ಘಟನೆ ಇಂದು(ನ.4) ಗುಜರಾತ್ ನ ಅಮ್ರೇಲಿ ಜಿಲ್ಲೆಯ ರಂಧಿಯಾ ಗ್ರಾಮದಲ್ಲಿ ನಡೆದಿದೆ.
ಮಧ್ಯಪ್ರದೇಶದ ಧಾರ್ನ ಎಂಬಲ್ಲಿಯ ಕಾರ್ಮಿಕ ದಂಪತಿಯ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಚಿರಾಗ್ ದೇಸಾಯಿ ತಿಳಿಸಿದ್ದಾರೆ.
ಕಾರ್ಮಿಕ ದಂಪತಿ ತಮ್ಮ ಮಕ್ಕಳನ್ನು ಬಿಟ್ಟು ಭರತ್ ಮಂದಾನಿ ಎಂಬುವವರ ಜಮೀನಿಗೆ ಕೆಲಸಕ್ಕೆ ತೆರಳಿದ್ದಾರೆ. ನಾಲ್ವರು ಮಕ್ಕಳು ಅಲ್ಲೇ ನಿಲ್ಲಿಸಿದ್ದ ಜಮೀನಿನ ಮಾಲಕನ ಕಾರಿಗೆ ಹತ್ತಿ ಆಟವಾಡುತ್ತಿದ್ದರು. 2 ರಿಂದ 7 ವರ್ಷದೊಳಗಿನ ನಾಲ್ವರು ಮಕ್ಕಳು ಆಟವಾಡುವಾಗ ಕಾರಿನೊಳಗೆ ಅಚಾನಕ್ಕಾಗಿ ಲಾಕ್ ಆಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ ವೇಳೆ ಮಕ್ಕಳ ಪೋಷಕರು ಮತ್ತು ಕಾರು ಮಾಲಕ ಕೆಲಸ ಮುಗಿಸಿ ವಾಪಾಸ್ಸಾದಾಗ ಮಕ್ಕಳು ಕಾರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಮ್ರೇಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click