ನ್ಯೂಸ್ ನಾಟೌಟ್: ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ. ಅದರಲ್ಲೂ ನವಜಾತ ಶಿಶುಗಳ ಆರೈಕೆ ಸಂದರ್ಭ ಹೆಚ್ಚು ಜಾಗರೂಕತೆ ವಹಿಸಬೇಕು. ಈ ಸಂದರ್ಭ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಯಾವ ರೀತಿ ನವಜಾತ ಶಿಶುಗಳ ಆರೈಕೆ ಮಾಡಬೇಕು ಎಂಬುವುದರ ಬಗ್ಗೆ ಸುಳ್ಯದ ಕೆವಿಜಿ ಮೆಡಿಕಲ್ ಮತ್ತು ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ| ಸುನೀತಾ ಅವರು ಸಮಗ್ರವಾಗಿ ವಿವರಿಸಿದ್ದಾರೆ.
ಪ್ರತಿವರ್ಷ ನವೆಂಬರ್ 15 – 21ರವರೆಗೆ “ನವಜಾತ ಶಿಶು ಆರೈಕೆಯ ಸಪ್ತಾಹ” ಎಂದು ಆಚರಿಸಲಾಗುತ್ತದೆ. ನವಜಾತ ಶಿಶುಗಳ ಆರೋಗ್ಯ ಸುರಕ್ಷತೆ ಮತ್ತು ಸುಖಸ್ಥಿತಿಯ ಕುರಿತಾದ ಪ್ರಮುಖ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ. ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಆಚರಿಸಲ್ಪಡುವ ಈ ಕಾರ್ಯಕ್ರಮ ನವಜಾತ ಶಿಶುವಿನ ಆರೈಕೆ ಮತ್ತು ಜೀವಿತಾವಧಿ ಉತ್ತೇಜಿಸಲು ಅತ್ಯಂತ ಮಹತ್ವದ್ದಾಗಿದೆ. ಮಗು ಹುಟ್ಟಿದಾಗಿನಿಂದ ಮೊದಲ 28 ದಿನಗಳ ಕಾಲ ನಿಯೋನೇಟಲ್ (ನವಜಾತ ಶಿಶು) ಪೀರಿಯಡ್ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಅತ್ಯಂತ ಸೂಕ್ಷ್ಮದಿಂದ ಆರೈಕೆ ಮಾಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ತಂದೆ, ತಾಯಿ ಆರೈಕೆದಾರರು ಮತ್ತು ವೈದ್ಯಕೀಯ ವೃತ್ತಿಪರರಿಗೆ ಅಗತ್ಯವಾದ ಮಾಹಿತಿ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ರಾಷ್ಟ್ರೀಯ ನವಜಾತ ಆರೈಕೆ ಸಪ್ತಾಹ ಭಾರತದಲ್ಲಿ ವಾರ್ಷಿಕವಾಗಿ ನವೆಂಬರ್ 15 ರಿಂದ 21ರ ನಡುವೆ ಆಚರಿಸಲಾಗುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮವಾಗಿದೆ. ಇದು ಮಗುವಿನ ಬದುಕುಳಿಯುವಿಕೆ ಮತ್ತು ಅಭಿವೃದ್ಧಿಗಾಗಿ ನವಜಾತ ಆರೈಕೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ. 2014ರಲ್ಲಿ “ಭಾರತ ನವಜಾತ ಕ್ರಿಯಾ ಯೋಜನೆ” ಪ್ರಾರಂಭಿಸಿದ ಮೊದಲ ದೇಶ ಭಾರತವಾಗಿದೆ. ಇದು ಜಾಗತಿಕ ಪ್ರತಿ ನವಜಾತ ಕ್ರಿಯಾ ಯೋಜನೆಯೊಂದಿಗೆ ಹೊಂದಿಕೆಯಾಗುತ್ತದೆ. ಮತ್ತು ಅನಗತ್ಯ ಶಿಶು ಮರಣ ಮತ್ತು ಸತ್ತು ಜನಿಸುವ ಪ್ರಮಾಣವನ್ನು ತೊಡೆದು ಹಾಕುವ ಗುರಿಯನ್ನು ಹೊಂದಿದೆ.
ಅಲ್ಲದೇ ನವಜಾತ ಶಿಶುಗಳಲ್ಲಿ ಆಂಟಿಮೈಕ್ರೋಬಿಯಲ್ ಪ್ರತಿರೋಧಕವನ್ನು ತಡೆಗಟ್ಟಲು ಆಂಟಿಮೈಕ್ರೋಬಿಯಲ್ ಔಷಧಗಳನ್ನು ಸಮರ್ಪಕವಾಗಿ ಬಳಸುವುದು. ತರ್ಕಬದ್ದ ಆಂಟಿಮೈಕ್ರೋಬಿಯಲ್ ಔಷಧಗಳ ಬಳಕೆ ಮತ್ತು ಸೋಂಕು ತಡೆಗಟ್ಟುವ ಕ್ರಮಗಳನ್ನು ಬಲಪಡಿಸುವ ಮೂಲಕ ಆಂಟಿಮೈಕ್ರೋಬಿಯಲ್ ಪ್ರತಿರೋಧವನ್ನು ಎದುರಿಸಲು ತುರ್ತು ಕ್ರಮ ಕೈಗೊಳ್ಳಲು ಈ ವರ್ಷ ನವಜಾತ ಶಿಶುಗಳ ಸಪ್ತಾಹ ಆಚರಣೆಯಲ್ಲಿ ಈ ಘೋಷವಾಕ್ಯವನ್ನು ಪರಿಗಣಿಸಲಾಗುತ್ತದೆ.
“Optimising Antimicrobial Use to Prevent Antimicrobial Resistance (AMR) in Newborns”
by Government of India, Ministry of Health & Family Welfare
ಸಮಾಜದಲ್ಲಿ, ಕುಟುಂಬಗಳಲ್ಲಿ ಮತ್ತು ತಂದೆ ತಾಯಂದಿರಲ್ಲಿ ನವಜಾತ ಶಿಶುಗಳ ಆರೈಕೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ನವಜಾತ ಶಿಶುಗಳ ಸಾವಿನ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಆಯೋಜಿಸಲಾಗುತ್ತದೆ.
- ಸಾಮಾಜಿಕ ಜಾಗೃತಿ ಅಭಿಯಾನಗಳು: ಈ ಅವಧಿಯಲ್ಲಿ ಸರ್ಕಾರಿ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಎನ್.ಜಿ.ಒಗಳು ಶಿಶುಗಳ ಆರೈಕೆಯ ಬಗ್ಗೆ ತಾಯಿಯ ಎದೆ ಹಾಲುಣಿಸುವ ಮಹತ್ವದ ಬಗ್ಗೆ ಸ್ವಚ್ಛ ಮತ್ತು ಸುರಕ್ಷಿತ ವಾತಾವರಣದಲ್ಲಿ ಶಿಶುವಿನ ಜನನದ ಅಗತ್ಯ ಹಾಗೂ ಲಸಿಕೆಗಳು ಬೆಂಬಲದ ಮಹತ್ವವನ್ನು ವಿವರಿಸುತ್ತದೆ.
- ನವಜಾತ ಶಿಶುಗಳ ಆರೋಗ್ಯ ಆರೈಕೆಯ ತರಬೇತಿ: ಆರೋಗ್ಯ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ವೈದ್ಯಕೀಯ ವೃತ್ತಿಪರರು ಮತ್ತು ತಂದೆ ತಾಯಿಗಳಿಗೆ ಶಿಶುಗಳ ಆರೈಕೆ ಕುರಿತಂತೆ ಸುಧಾರಿತ ತಂತ್ರಜ್ಞಾನಗಳನ್ನು ಪರಿಚಯಿಸುತ್ತವೆ. ಇದರಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳ ಲಕ್ಷಣಗಳು, ತೂಕ ಪ್ರಮಾಣಿಸುವುದು ಮತ್ತು ಕಾಯಿಲೆ ಅರ್ಥಮಾಡಿಸಲಾಗುತ್ತದೆ.
- ಆರೋಗ್ಯ ತಪಾಸಣೆಗಳು ಮತ್ತು ಪರೀಕ್ಷೆಗಳು: ಆಸ್ಪತ್ರೆಗಳು ಮತ್ತು ಆರೋಗ್ಯಕೇಂದ್ರಗಳು ಈ ಸಪ್ತಾಹದಲ್ಲಿ ಉಚಿತ ತಪಾಸಣೆಗಳೊಂದಿಗೆ ಶಿಶುಗಳ ಆರೋಗ್ಯದ ಸಂಪೂರ್ಣ ಅವಲೋಕನ ಮಾಡುತ್ತಾರೆ.
- ತಂದೆ ತಾಯಿಯರಿಗೆ ಸಲಹೆ ಮತ್ತು ಬೆಂಬಲ ತಂದೆ ತಾಯಿಯ ಮಾನಸಿಕ ಆರೋಗ್ಯವನ್ನು ಪರೀಕ್ಷಿಸಿ ಅದಕ್ಕೆ ಅನುಗುಣವಾಗಿ ಸಲಹೆ ನೀಡಿ ಬೆಂಬಲಿಸುತ್ತಾರೆ.
ಈ ಸಪ್ತಾಹ ಆಚರಿಸುವ ಪ್ರಮುಖ ಉದ್ದೇಶವೇನೆಂದರೆ ಆರೋಗ್ಯಕರ ಸಮುದಾಯಗಳ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ. ಹೆತ್ತವರಿಗೆ ವೈದ್ಯಕೀಯ ಸಿಬ್ಬಂದಿಗೆ ಮತ್ತು ಸಮುದಾಯದವರಿಗೆ ಶಿಶು ಆರೈಕೆಯ ಜಾಗೃತಿ ನೀಡುವ ಮೂಲಕ ಶಿಶುಗಳ ಆರೋಗ್ಯ ವೃದ್ಧಿಗೆ ಮಹತ್ವಪೂರ್ಣ ಪಾತ್ರ ವಹಿಸುತ್ತದೆ.
ಈ ಆಚರಣೆ ಕೇವಲ ವಾರಕ್ಕೆ ಮಾತ್ರ ಸೀಮಿತವಾಗದೆ ವರ್ಷವಿಡೀ ಇದರ ಬಗ್ಗೆ ಅರಿವು ಮೂಡಿಸುವುದು ಸರ್ಕಾರ, ಆಸ್ಪತ್ರೆಗಳು ಮತ್ತು ಸಮುದಾಯಗಳು ಅಗತ್ಯವಾದ ಬೆಂಬಲವನ್ನು ನೀಡಬೇಕು. ಇದರಿಂದ ಸಮರ್ಥ ಹಾಗೂ ಆರೋಗ್ಯಕರ ಭವಿಷ್ಯ ರೂಪಿಸುವ ಮುಖಾಂತರ ದೇಶದ ಭವಿಷ್ಯವನ್ನು ಬಲಿಷ್ಠಗೊಳಿಸಬಹುದು.
- 1ರಿಂದ 6 ತಿಂಗಳವರೆಗೆ ತಾಯಿಯ ಎದೆ ಹಾಲು ಮಾತ್ರ ಉಣಿಸುವುದು.
- ರಾಷ್ಟ್ರೀಯ ಚುಚ್ಚುಮದ್ದು ವೇಳಾಪಟ್ಟಿಯ ಪ್ರಕಾರ ಚುಚ್ಚು ಮದ್ದುಗಳನ್ನು ತಪ್ಪದೇ ಕೊಡಿಸುವುದು.
- ಮಗುವಿನ ಸುತ್ತ ಮುತ್ತಲಿನ ವಾತಾವರಣ ಶುಚಿಯಾಗಿಟ್ಟುಕೊಳ್ಳುವುದು.
- ಮಗುವನ್ನು ಮುಟ್ಟುವಾಗ ಹಾಲುಣಿಸುವಾಗ ಕೈ ತೊಳೆದುಕೊಳ್ಳುವುದು.
- ಮೊದಲ ಆರು ತಿಂಗಳು ಕುಳಿತುಕೊಂಡೇ ಹಾಲುಣಿಸುವುದು.
- ಮೊದಲ ದಿನಗಳಲ್ಲಿ ಹೊಕ್ಕುಳ ಬಳ್ಳಿಗೆ ನೀರು ತಾಗದಂತೆ ನೋಡಿಕೊಳ್ಳುವುದು. ರಕ್ತ ಅಥವಾ ಕೀವು ಬರುತ್ತಿದ್ದರೆ ವೈದ್ಯರನ್ನು ತಪ್ಪದೆ ಭೇಟಿಯಾಗುವುದು.
- ವಿಟಮಿನ್ ಡಿ3 ಬಿಂದು ಒಂದು ವರ್ಷದವರೆಗೆ ತಪ್ಪದೆ ನೀಡುವುದು.
- ಮೊದಲ ಆರು ತಿಂಗಳು ಕೆಮ್ಮು ಶೀತ ಜ್ವರ ಯಾವುದೇ ಬಂದರೂ ತಪ್ಪದೆ ವೈದ್ಯರನ್ನು ಭೇಟಿಯಾಗಿ ಔಷಧಿ ಪಡೆದುಕೊಳ್ಳುವುದು.