ಆಸ್ಪತ್ರೆಯ ಐಸಿಯುನಲ್ಲಿದ್ದ ಮೃತ ವ್ಯಕ್ತಿಯ ಎಡಗಣ್ಣು ಕಾಣೆ..! ಇಲಿಗಳನ್ನು ದೂರಿದ ವೈದ್ಯರು..!

ನ್ಯೂಸ್‌ ನಾಟೌಟ್‌: ಆಸ್ಪತ್ರೆಯಲ್ಲಿಯೇ ಮೃತ ವ್ಯಕ್ತಿಯೊಬ್ಬನ ಕಣ್ಣು ನಾಪತ್ತೆಯಾದ ಘಟನೆ ನಡೆದಿದೆ. ಇದಕ್ಕೆಲ್ಲಾ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತ ವ್ಯಕ್ತಿಯ ಕುಟುಂಬ ಆರೋಪಿಸಿದರೆ, ವೈದ್ಯರು ಮಾತ್ರ ಇದಕ್ಕೆಲ್ಲಾ ಇಲಿಗಳು ಕಾರಣ ಎಂದು ಹೇಳಿದ್ದಾರೆ ಎನ್ನಲಾಗಿದೆ. ಬಿಹಾರದ ರಾಜಧಾನಿ ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯೊಬ್ಬನ ಕಣ್ಣುಗಳು ನಾಪತ್ತೆಯಾದ ಆಘಾತಕಾರಿ ಘಟನೆಯೊಂದು ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿ ಮೃತ ವ್ಯಕ್ತಿಯ ಕುಟುಂಬಸ್ಥರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ.ನಳಂದದಲ್ಲಿ ನಡೆದ ಹಿಂಸಾಚಾರದಲ್ಲಿ ಫುಂತೂಶ್ ಎಂಬ ವ್ಯಕ್ತಿಗೆ ಗುಂಡೇಟು ತಗುಲಿ ಆತನನ್ನು ನವೆಂಬರ್ 14 ರಂದು NMCH ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಆತನನ್ನು ಐಸಿಯುಗೆ ಶಿಫ್ಟ್‌ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್‌ 15 ರಂದು ಫಂತೂಶ್‌ ಮೃತಪಟ್ಟಿದ್ದನು. ರಾತ್ರಿಯಾಗಿದ್ದ ಕಾರಣ ಮರಣೋತ್ತರ ಪರೀಕ್ಷೆಯನ್ನು ನಡೆಸದೆ ವೈದ್ಯರು ಮೃತದೇಹವನ್ನು ಐಸಿಯುನಲ್ಲೇ ಇರಿಸಿದ್ದರು. ಆದರೆ ಮರುದಿನ ಬೆಳಗ್ಗೆ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸುವ ಸಂದರ್ಭದಲ್ಲಿ ಮೃತ ಫಂತೂಶ್‌ನ ಎಡಗಣ್ಣು ನಾಪತ್ತೆಯಾಗಿತ್ತು. ಮೃತ ದೇಹ ಇರಿಸಿದ್ದ ಸ್ಟ್ರೆಚರ್‌ ಮೇಲೆ ಸರ್ಜಿಕಲ್‌ ಬ್ಲೇಡ್‌ ಇರುವುದನ್ನು ಮೃತನ ಕುಟುಂಬಸ್ಥರು ಗಮನಿಸಿದ್ದು, ವೈದ್ಯರೇ ಸಾವಿನ ನಂತರ ಫಂತೂಶ್‌ನ ಕಣ್ಣನ್ನು ತೆಗೆದಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆಯನ್ನು ಮಾಡಿದ್ದಾರೆ. ಆದರೆ ವೈದ್ಯರು ಮಾತ್ರ ಬಹುಶಃ ಇಲಿಗಳು ಕಣ್ಣನ್ನು ಕಚ್ಚಿರಬಹುದು ಎಂದು ಇಲಿಗಳ ಮೇಲೆ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.