ನ್ಯೂಸ್ ನಾಟೌಟ್: ಶಿಕ್ಷಣ ತಜ್ಞ ಹಾಗೂ ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸ್ಥಾಪಕ ಅಧ್ಯಕ್ಷ ಡಾ.ಕುರುಂಜಿ ವೆಂಕಟ್ರಮಣ ಗೌಡರ 96ನೇ ಜಯಂತ್ಯೋತ್ಸವದ ಹಿನ್ನೆಲೆಯಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ನ.24 ರಂದು ಹರಿಹರ ಪಲ್ಲತಡ್ಕದ ಶ್ರೀ ಹರಿಹರೇಶ್ವರ ದೇವಾಲಯದ ಕಲಾ ಮಂದಿರದಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ ಎಂದು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಎನ್. ಎ. ಜ್ಞಾನೇಶ್ ತಿಳಿಸಿದ್ದಾರೆ.
ಕೆವಿಜಿ ಸುಳ್ಯ ಹಬ್ಬದ ಪ್ರಯುಕ್ತ ನಡೆಯುವ ವೈದ್ಯಕೀಯ ಶಿಬಿರದಲ್ಲಿ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರ ಮತ್ತು ಸುಬ್ರಹ್ಮಣ್ಯ ಇವರ ಸಹಭಾಗಿತ್ವದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತಡ್ಕ ಮತ್ತು ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಸುಮಾರು 400-500 ಮಂದಿ ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಎಲ್ಲಾ ವೈದ್ಯಕೀಯ ತಪಾಸಣೆ, ಆಯುರ್ವೇದ ಚಿಕಿತ್ಸೆ ವಿಧಾನದ ತಪಾಸಣೆಗಳು, ದಂತ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣೆ, ಎಲ್ಲಾ ರೀತಿಯ ಕಾಯಿಲೆಗಳ ತಪಾಸಣೆಗಳು ನಡೆಯಲಿದೆ. ಸಮಾರಂಭವನ್ನು ಎಒಎಲ್ಇ(ರಿ.) ಸುಳ್ಯ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಉದ್ಘಾಟಿಸಲಿದ್ದಾರೆ. ಕೆವಿಜಿ ಸುಳ್ಯ ಹಬ್ಬ ಸೇವಾ ಸಂಘದ ಅಧ್ಯಕ್ಷ ಡಾ.ಎನ್.ಎ. ಜ್ಞಾನೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹರಿಹರ ಪಲ್ಲತಡ್ಕದ ಹಿರಿಯ ವೈದ್ಯ ಡಾ. ಚಂದ್ರಶೇಖರ ಕಿರಿಭಾಗ ಅವರನ್ನು ಸನ್ಮಾನಿಸಲಾಗುವುದು. ಅಲ್ಲದೇ 90 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗೌರವಾರ್ಪಣೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಹರಿಹರ ಪಲ್ಲತಡ್ಕ ಗ್ರಾ.ಪಂ. ಅಧ್ಯಕ್ಷ ವಿಜಯ ಕುಮಾರ್ ಅಂಜಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ಕೊಲ್ಲಮೊಗ್ರು – ಹರಿಹರ ಸೊಸೈಟಿ ಅಧ್ಯಕ್ಷ ಹರ್ಷಕುಮಾರ್ ಡಿ.ಎಸ್ ಭಾಗವಹಿಸಲಿದ್ದಾರೆ.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಕೋಶಾಧಿಕಾರಿ ಶ್ರೀಕೃಷ್ಣ ಎಂ.ಎನ್, ಸಂಚಾಲಕ ಡಾ. ಪುರುಷೋತ್ತಮ ಕೆ.ಜಿ, ಸದಸ್ಯತ್ವ ಅಭಿಯಾನದ ಸಂಚಾಲಕ ಹರೀಶ್ ಬಂಟ್ವಾಳ, ಕೆವಿಜಿ ಮೆಡಿಕಲ್ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ರಘುಪತಿ.ಯು.ಎಂ. ಸುದ್ದಿಗೋಷ್ಠಿಯಲ್ಲಿದ್ದರು.