ನ್ಯೂಸ್ ನಾಟೌಟ್: ರಣಹದ್ದಿನ ಎರಡೂ ಕಾಲುಗಳಿಗೆ ಪ್ರತ್ಯೇಕ ಬಣ್ಣದಲ್ಲಿ ಇಂಗ್ಲಿಷ್ ಅಕ್ಷರ ಮತ್ತು ಸಂಖ್ಯೆ ಬರೆದಿರುವ ಟ್ಯಾಗ್ ಕಟ್ಟಲಾಗಿದೆ. ಜೊತೆಗೆ ಬೆನ್ನ ಮೇಲೆ ಜಿಪಿಎಸ್ ಟ್ರ್ಯಾಕರ್ ಇದೆ. ಹೀಗಾಗಿ ಸ್ಥಳೀಯರು ರಣಹದ್ದು ಬೇಹುಗಾರಿಕೆಗಾಗಿ ಶತ್ರು ದೇಶದಿಂದ ಬಂದಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯ ಸಮೀಪ ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ರಣಹದ್ದು ನ.10 ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಕೈಗಾ ಅಣು ವಿದ್ಯುತ್ ಕೇಂದ್ರ, ಕದಂಬ ನೌಕಾನೆಲೆ ಇದ್ದು, ಈ ರಣಹದ್ದು ಕಾಣಿಸಿಕೊಂಡಿದ್ದರಿಂದ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಹೀಗಾಗಿ ಪಕ್ಷಿಯನ್ನು ಬೇಹುಗಾರಿಕೆ ಉದ್ದೇಶಕ್ಕೆ ಬಳಸಲಾಗುತ್ತಿದೆಯೇ ಎಂಬ ಆತಂಕದಿಂದ ಭದ್ರತಾ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.
ಆದರೆ ಹಕ್ಕಿಯ ಮೇಲಿನ ಜಿಪಿಎಸ್ ಟ್ಯಾಗ್ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್ಎಚ್ಎಸ್) ಅಳವಡಿಸಿರುವುದು ಕಂಡು ಬಂದಿದ್ದರಿಂದ ಅವರ ಅನುಮಾನವು ಆಧಾರ ರಹಿತವಾಗಿತ್ತು ಎನ್ನಲಾಗಿದೆ. ಸಂಶೋಧನಾ ಉದ್ದೇಶಗಳಿಗಾಗಿ ರಣಹದ್ದಿಗೆ ಟ್ಯಾಗ್ ಮಾಡಲಾಗಿತ್ತು. ಕಾರವಾರದ ಸುತ್ತಲೂ ಅದೇ ರೀತಿಯ ಜಿಪಿಎಸ್ ಟ್ಯಾಗ್ ಮಾಡಿದ ಪಕ್ಷಿಗಳು ಹಾರಾಟ ನಡೆಸಿದ ದಾಖಲೆಗಳಿವೆ. ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಿಂದ ರಣಹದ್ದು ಬಿಡುಗಡೆಯಾಗಿದೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನವನದಲ್ಲಿ ಬಾಂಬೆ ನ್ಯಾಚ್ಯುರಲ್ ಹಿಸ್ಟರಿ ಆಫ್ ಸೊಸೈಟಿಯಿಂದ ಸಂಶೋಧನೆ ನಡೆಯುತ್ತಿದ್ದು, 5 ರಣಹದ್ದಿಗೆ ಟ್ಯಾಗಿಂಗ್ ಮಾಡಿ ಸಂತಾನೋತ್ಪತ್ತಿ ಬಳಿಕ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಒಂದು ಇಲ್ಲಿಗೆ ಬಂದಿದೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅದರ ಹಿಂಭಾಗದಲ್ಲಿರುವ ಟ್ರಾನ್ಸ್ಮಿಟರ್ ವೆಬ್ಸೈಟ್ ವಿಳಾಸ mahaforest.gov.in ಎಂದಿದೆೆ. ಪಕ್ಷಿಯನ್ನು ಪತ್ತೆಹಚ್ಚಿದ ನೌಕಾನೆಲೆಯ ಅಧಿಕಾರಿಗಳು ಅದರ ಫೋಟೋಗಳು ಮತ್ತು ವೀಡಿಯೊಗಳನ್ನು ಮತ್ತು ಜಿಪಿಎಸ್ ಟ್ಯಾಗ್ ಅನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾರವಾರದ ನದಿ ತೀರದ ಸ್ಥಳೀಯ ನಿವಾಸಿಗಳು ಹಕ್ಕಿಯ ಛಾಯಾಚಿತ್ರಗಳನ್ನು ತೆಗೆದು ನೌಕಾ ಅಧಿಕಾರಿಗಳಿಗೆ ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಿದ್ದರು ಎನ್ನಲಾಗಿದೆ.