ನ್ಯೂಸ್ ನಾಟೌಟ್ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ ದೀಪಾವಳಿ ಮುನ್ನಾದಿನ ಫಿಲ್ಲೋಕಾವ್ಯ ಶೀರ್ಷಿಕೆಯಡಿ ಸಸ್ಯಜನ್ಯ ವಸ್ತುಗಳು ಎಲೆಗಳನ್ನು ಬಳಸಿಕೊಂಡು ಕಲಾತ್ಮಕ ಗೂಡು ದೀಪ ರಚಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾಲೇಜಿನ ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥರು ಮತ್ತು ಹಿರಿಯ ಉಪನ್ಯಾಸಕರಾದ ಉಷಾ ಎಂ.ಪಿ. ಸ್ಪರ್ಧಿಗಳಿಗೆ ಶುಭಹಾರೈಸಿದರು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸಸ್ಯಜನ್ಯ ವಸ್ತುಗಳಾದ ತೆಂಗಿನ ಗರಿ, ಹೂ, ಬಳ್ಳಿ, ಕಡ್ಡಿ, ವಿವಿಧ ಎಲೆಗಳು ಇತ್ಯಾದಿ ಬಳಸಿ ವಿನೂತನವಾಗಿ ಗೂಡುದೀಪ ರಚಿಸಿದ್ದು ವೈಶಿಷ್ಟ್ಯಪೂರ್ಣವಾಗಿ ಮೂಡಿಬಂದವು. ದೀಪಾವಳಿ ಸಂದರ್ಭದಲ್ಲಿ ನೈಜ ಪ್ರಕೃತಿ ಸ್ನೇಹಿಯಾಗಿ ಯಾವುದೇ ಪ್ಲಾಸ್ಟಿಕ್ ಇನ್ನಿತರ ಪರಿಸರ ಹಾನಿಕಾರಕ ವಸ್ತುಗಳನ್ನು ಬಳಸದೆ ಅಲಂಕಾರಿಕ ಗೂಡುದೀಪ ತಯಾರಾದದ್ದು ನೋಡುಗರ ಗಮನ ಸೆಳೆಯಿತು.
ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ಹಮ್ಮಿಕೊಂಡ ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಲೇಜಿನ ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆ ಭವ್ಯ ಪಿ.ಎಂ, ಸಮಾಜ ಕಾರ್ಯ ವಿಭಾಗ ಮುಖ್ಯಸ್ಥೆ ಕೃಪಾ ಕೆ ಎನ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥೆ ದೀಕ್ಷಾ ಸಹಕರಿಸಿದರು. ನೇಚರ್ ಕ್ಲಬ್ ಕಾರ್ಯದರ್ಶಿ ಶಿಲ್ಪಾ ಎಸ್, ಸ್ಪರ್ಧಾ ಸಮಿತಿ ಸಂಚಾಲಕ ತೇಜಸ್, ಸಂಯೋಜನಾ ಸಮಿತಿಯ ತನುಷ್ ಮತ್ತು ಶಶಾಂಕ್ ಸ್ಪರ್ಧೆ ಆಯೋಜಿಸಿದ್ದರು. ಜೀವವಿಜ್ಞಾನ ವಿಭಾಗಗಳ ಉಪನ್ಯಾಸಕರಾದ ಕುಲದೀಪ್ ಪೆಲ್ತಡ್ಕ, ಅಕ್ಷತಾ ಬಿ, ಕೃತಿಕಾ ಕೆ ಜೆ, ಹರ್ಷಕಿರಣ ಬಿ ಆರ್ ಮತ್ತು ಪಲ್ಲವಿ ಕೆ ಎಸ್ ಮಾರ್ಗದರ್ಶನ ನೀಡಿದರು.