ನ್ಯೂಸ್ ನಾಟೌಟ್: ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರೊಂದು ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ಸಂಭವಿಸಿದೆ. ಕಾರು ತಲಪಾಡಿ ಮೂಲದ ಅಂಕಿತ್ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಅಂಕಿತ್ ಅವರು ಶುಕ್ರವಾರ ಸಾಯಂಕಾಲ ಸೆಕೆಂಡ್ ಸೇಲ್ ಮಳಿಗೆಯಲ್ಲಿ ಮಾರುತಿ ರಿಡ್ಜ್ ಕಾರನ್ನು ಖರೀದಿಸಿದ್ದರು. ಬಳಿಕ ಕಾರನ್ನು ಕದ್ರಿ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ್ದರು.
ಸ್ವಲ್ಪ ಸಮಯದ ಬಳಿಕ ಕಾರು ಚಾಲನೆ ಮಾಡಿದಾಗ ಕಾರಿನ ಬೋನೆಟ್ನಲ್ಲಿ ಶಾರ್ಟ್ಸರ್ಕ್ಯೂಟ್ ಆಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರು ನಿಲ್ಲಿಸಿದ್ದಾರೆ. ಅದಾಗಲೇ ಕಾರು ಬೆಂಕಿಗಾಹುತಿಯಾಗಿತ್ತು. ತಕ್ಷಣ ಕದ್ರಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲಾಗಿದೆ. ಯಾರಾದರೂ ಸೆಕೆಂಡ್ ಸೇಲ್ ಮಳಿಗೆಯಲ್ಲಿ ಕಾರು ಖರೀದಿಸುವ ಯೋಚನೆ ಮಾಡಿದ್ದರೆ ಪರಿಣತರಿಂದ ಸರಿಯಾಗಿ ಪರಿಶೀಲಿಸಿ ನಂತರ ಮುಂದುವರಿಯುವುದು ಉತ್ತಮ. ಇದರಿಂದ ಮುಂದಾಗುವ ಅನಾಹುತವನ್ನು ತಪ್ಪಿಸಬಹುದು.