ನ್ಯೂಸ್ ನಾಟೌಟ್: ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ನಟಿ ದೀಪಿಕಾ ದಾಸ್ ಇತ್ತೀಚೆಗಷ್ಟೆ ದೀಪಕ್ ಕುಮಾರ್ ಎಂಬುವರೊಟ್ಟಿಗೆ ವಿವಾಹವಾಗಿದ್ದಾರೆ. ಪ್ರಸ್ತುತ ಪ್ರವಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ದೀಪಿಕಾ ದಾಸ್ ರ ತಾಯಿ ಯುವಕನೊಬ್ಬನ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮ ಮಗಳು ಹಾಗೂ ಅಳಿಯನ ಬಗ್ಗೆ ಅಪಪ್ರಚಾರ ಮಾಡಿರುವ ಹಾಗೂ ಬೆದರಿಕೆ ಒಡ್ಡಿರುವ ಆರೋಪವನ್ನು ದೀಪಿಕಾ ದಾಸ್ ತಾಯಿ ಆ ಯುವಕನ ಮೇಲೆ ಮಾಡಿದ್ದಾರೆ.
ಯಶವಂತ್ ಎಂಬಾತನ ವಿರುದ್ಧ ದೀಪಿಕಾ ದಾಸ್ ತಾಯಿ ಪದ್ಮಲತಾ ದೂರು ನೀಡಿದ್ದು, ಯಶವಂತ, ದೀಪಿಕಾ ದಾಸ್ ಮತ್ತು ಅವರ ಪತಿ ದೀಪಕ್ ಕುಮಾರ್ ವಿರುದ್ಧ ಅಪಪ್ರಚಾರ, ಮಾನ ಹಾನಿ ಮಾಡಿದ್ದ, ಅಲ್ಲದೆ ಬೆದರಿಕೆ ಸಹ ಒಡ್ಡಿದ್ದಾನೆ ಎಂದು ತಿಳಿಸಿದ್ದಾರೆ. ಪದ್ಮಲತಾ ಅವರಿಗೆ ಕರೆ ಮಾಡಿದ್ದ ಯಶವಂತ್ ‘ದೀಪಿಕಾ ದಾಸ್ ಗೆ ಏಕೆ ಆತನೊಂದಿಗೆ ಮದುವೆ ಮಾಡಿದ್ದೀರಿ, ಆತ ಒಬ್ಬ ಮೋಸಗಾರ. ದೀಪಕ್ ಕುಮಾರ್ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ, ಹಲವು ಪ್ರಕರಣ ಆತನ ಮೇಲಿದ್ದು ಜೈಲಿಗೆ ಸಹ ಹೋಗಿ ಬಂದಿದ್ದಾನೆ’ ಎಂದು ಹೇಳಿದ್ದನಂತೆ.
ದೀಪಿಕಾ ದಾಸ್ ಗೂ ಕರೆ ಮಾಡಿರುವ ಯಶವಂತ್, ‘ನನಗೆ ಹಣ ಕೊಡಿ, ಹಣ ಕೊಡದೆ ಇದ್ದರೆ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಯಶವಂತ್ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೀಪಿಕಾ ದಾಸ್ ಅವರ ಗಂಡ ದೀಪಕ್ ಕುಮಾರ್ ಇಂದಾಗಿ ನನಗೆ ನಷ್ಟವಾಗಿದ್ದು, ಸಾಲಗಾರರ ಕಾಟ ಹೆಚ್ಚಾಗಿದೆ, ನೀವು ನನಗೆ ಹಣ ಕೊಡದೇ ಇದ್ದರೆ ನಿಮ್ಮ ಹೆಸರುಗಳು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೀನಿ ಎಂದು ಯಶವಂತ್ ಎಂಬಾತ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ದೀಪಕ್ ಕುಮಾರ್ ಅವರ ಕೆಲವು ಗೆಳೆಯರಿಗೂ ಸಹ ಯಶವಂತ್ ಕರೆ ಮಾಡಿದ್ದಾನೆ. ಕಳೆದ ಏಳು ತಿಂಗಳಿಂದಲೂ ಯಶವಂತ್ ಎಂಬಾತ ದೀಪಿಕಾ ದಾಸ್, ಪದ್ಮಲತಾ ಹಾಗೂ ದೀಪಕ್ ಕುಮಾರ್ ಗೆ ಸಂಬಂಧಿಸಿದ ಇನ್ನಿತರರಿಗೆ ಕರೆ ಮಾಡುತ್ತಲೇ ಇದ್ದಾನೆ ಎಂದು ಪದ್ಮಲತಾ ದೂರಿನಲ್ಲಿ ಹೇಳಿದ್ದಾರೆ. ಮಾದನಾಯಕನಹಳ್ಳಿಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Click